



ನಭಾಪುರ; ನೆಮ್ಮದಿಯ ಮಹಾಪೂರ
ಅಚ್ಚುಕಟ್ಟಾದ ಕಾಂಕ್ರೀಟ್ ರಸ್ತೆಗಳು... ರಸ್ತೆ ಬದಿ ವ್ಯವಸ್ಥಿತವಾಗಿರುವ ಸೋಲಾರ್ ದೀಪಗಳು.... ಪ್ರತಿ ಮನೆ ಎದುರು ಮಳೆನೀರು ಹಿಡಿಯುವ ವ್ಯವಸ್ಥೆ... ಎಲ್ಲೂ ಕಸದ ದರ್ಶನವಿಲ್ಲ...ಅಲ್ಲಲ್ಲಿ ಕಾಣುವ ಬಯೋಗ್ಯಾಸ್ ಪ್ಲಾಂಟ್‍ಗಳು ಇದು ಯಾವುದೋ ನಗರಪ್ರದೇಶದ ಮಾದರಿ ಬಡಾವಣೆಯ ವಿವರಣೆಯಲ್ಲ.
ಜಿಲ್ಲಾ ಕೇಂದ್ರ ಗದಗಿನಿಂದ 15 ಕಿ.ಮೀ ಅಂತರದಲ್ಲಿರುವ ನಭಾಪುರ ಎಂಬ ಮಾದರಿ ಗ್ರಾಮದ ಸ್ಥೂಲ ಪರಿಚಯವಿದು. ನಭಾಪುರ 148 ರಿಂದ 150 ಕುಟುಂಬಗಳಿರುವ ಚಿಕ್ಕ ಗ್ರಾಮ. 800 ಜನಸಂಖ್ಯೆ ಹೊಂದಿರುವ ಈ ಗ್ರಾಮ ಇಂದು ಬಹಳಷ್ಟು ಕಾರಣಗಳಿಂದ ಸುದ್ದಿಯಲ್ಲಿದೆ. ಸಾಕ್ಷರತೆ, ಸ್ವಾವಲಂಬಿತನ, ಸ್ವಚ್ಛತೆ ಎನ್ನುವ ಪದಗಳು ಈ ಗ್ರಾಮದಲ್ಲಿ ಅರ್ಥ ಕಂಡುಕೊಂಡ ಪರಿಣಾಮ ಗ್ರಾಮದ ಚಿತ್ರಣ ಬದಲಾಗಿದೆ.
ನೀರು, ನೈರ್ಮಲ್ಯ, ಆರ್ಥಿಕ ಪ್ರಗತಿ, ಒಗ್ಗಟ್ಟು, ಸಾಮಾಜಿಕ ಸಾಮರಸ್ಯ ಹೀಗೆ ಹಲವು ಮಜಲುಗಳಲ್ಲಿ ಈ ಗ್ರಾಮದ ಅಭಿವೃದ್ಧಿ ವಿಸ್ತøತಗೊಂಡಿದೆ. ಮೊದಲು 30ರಿಂದ 40 ಲೀ ಉತ್ಪಾದನೆಯಾಗುತ್ತಿದ್ದ ಹಾಲು ಇಂದು 150 ಲೀ ವರೆಗೆ ಹಾಲು ಉತ್ಪಾದನೆಯ ಗುರಿ ಸಾಧಿಸಿದೆ. ಮೊದಲಾದರೆ ಕೆಎಂಎಫ್ ಡೈರಿಗೆ ಹಾಲು ಕೊಡಬೇಕೆಂದರೆ ಸಮೀಪದ ಬೆಳಧಡಿಗೆ ಹೋಗಬೇಕಿತ್ತು. ಯಾವಾಗ ಕೆಎಂಎಫ್ ವಾಹನ ಗ್ರಾಮಕ್ಕೆ ಬಂದು ಹಾಲು ಸಂಗ್ರಹಿಸಲು ಮುಂದಾಯಿತೋ ಅಂದಿನಿಂದ ಹಾಲು ಉತ್ಪಾದನೆ ಪ್ರಮಾಣವೂ ವೃದ್ಧಿಯಾಯಿತು. ಮನೆ ಬಳಕೆಗೆ ಒಂದಿಷ್ಟು ಎತ್ತಿಟ್ಟುಕೊಂಡು ಉಳಿದ ಹಾಲನ್ನು ತಮ್ಮ ಸೊಸೈಟಿ ಮೂಲಕ ಕೆಎಂಎಫ್‍ಗೆ ಕೊಡ್ತಾರೆ ಗ್ರಾಮಸ್ಥರು. ಆ ಮೂಲಕ ಆರ್ಥಿಕ ಚೇತರಿಕೆ ಕಂಡಿದ್ದಾರೆ.
ದುಶ್ಚಟಗಳಿಗಿಲ್ಲ ಅವಕಾಶ
ಗ್ರಾಮೀಣ ಪ್ರದೇಶಗಳಲ್ಲಿ ಸಾರಾಯಿ, ಗುಟ್ಕಾ, ಬೀಡಿ, ಸಿಗರೇಟು ಸೇವನೆ ಸಾಮಾನ್ಯವಾಗಿರುತ್ತದೆ. ಆದರೆ ಈ ಗ್ರಾಮ ಇದಕ್ಕೆ ಅಪವಾದ. ಗ್ರಾಮದ ಯಾವ ಅಂಗಡಿಗಳಲ್ಲೂ ಗುಟ್ಕಾ, ಬೀಡಿ, ಸಿಗರೇಟ್ ಪ್ಯಾಕೇಟ್ ಕಾಣುವುದಿಲ್ಲ. ಸಾರಾಯಿಯಂತೂ ಇಲ್ಲವೇ ಇಲ್ಲ. ಹೊರಗಿನಿಂದಲೂ ಗ್ರಾಮಕ್ಕೆ ಯಾರೂ ಕುಡಿದು ಬರುವಂತಿಲ್ಲ. ಈ ಮೊದಲು ಹಾಗೇನಾದರೂ ಕುಡಿದು ಬಂದವರು ಸಿಕ್ಕರೆ ಗ್ರಾಮದ ಸೇವಾಲಾಲ ಮಂದಿರ ಎದುರಿಗಿರುವ ನಿಂಬೆ ಗಿಡಕ್ಕೆ ಕಟ್ಟಿ ಹಾಕಿ ಮೈಚಳಿ ಬಿಡಿಸುತ್ತಿದ್ದರು. ಈಗ ಗ್ರಾಮಸ್ಥರು ಎಚ್ಚೆತ್ತದ್ದರಿಂದ ಆ ಪ್ರಮೇಯವೂ ಇಲ್ಲ. ಏನೋ ಊಟ ಆದ ಮೇಲೆ ಎಲೆ ಅಡಿಕೆ ಹಾಕುತ್ತಾರೆ ಅಷ್ಟೇ ಅಂತಾರೆ ಊರಿನ ಹಿರಿಯ ತಾವರಪ್ಪ ಲಾಲಪ್ಪ ನಾಯಕ.
ತಿಂಗಳಿಗೊಮ್ಮೆ ಗ್ರಾಮಸಭೆ
ನಭಾಪುರ ಗ್ರಾಮಸ್ಥರು ರೈತ ಸಂಘ ಸ್ಥಾಪಿಸಿಕೊಂಡಿದ್ದಾರೆ. 9 ಜನ ಕಾರ್ಯಕಾರಿ ಸಮಿತಿ ಸದಸ್ಯರು ಐವರು ಸಲಹಾ ಸಮಿತಿ ಸದಸ್ಯರನ್ನೊಳಗೊಂಡ ಈ ಸಂಘ ಗ್ರಾಮದ ಅಭಿವೃದ್ಧಿಯ ರೂವಾರಿ. ಪ್ರತಿ ತಿಂಗಳು ಗ್ರಾಮಸ್ಥರೆಲ್ಲರೂ ಸೇರಿ ಮೊದಲನೇ ಸೋಮವಾರ ಸೇವಾಲಾಲ ಮಂದಿರ ಎದುರು ಸಭೆ ನಡೆಸುತ್ತಾರೆ. ಗ್ರಾಮದ ಆಗುಹೋಗುಗಳು, ಆಗಬೇಕಾದ ಅಭಿವೃದ್ಧಿ ಬಗ್ಗೆ, ತೊಂದರೆ ತೊಡಕುಗಳ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತೇವೆ .ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವುದರ ಜತೆಗೆ ಸರಕಾರದಿಂದ ಸಿಗುವ ಯೋಜನೆಗಳ ಬಗ್ಗೆ ಮತ್ತು ಅವುಗಳ ಅನುಷ್ಠಾನದ ಚಿಂತನೆ ಮಾಡಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ ಎನ್ನುತ್ತಾರೆ ಮುಖಂಡ ಧನಸಿಂಗ್. ತಿಂಗಳಿಗೊಮ್ಮೆ ಗದಗಿನ ಶ್ರೀರಾಮ ಟ್ರಸ್ಟ್‍ನ ಸಹಯೋಗದೊಂದಿಗೆ ರಿಲಾಯನ್ಸ್ ಫೌಂಡೇಷನ್ ಗ್ರಾಮದ ರೈತ ಸಂಘದ ಕಚೇರಿಯಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸುತ್ತದೆ. ಗ್ರಾಮಸ್ಥರೆಲ್ಲರೂ ಇದರ ಸದುಪಯೋಗ ಪಡೆಯುತ್ತಿದ್ದಾರೆ
ಸ್ನೇಹಭೋಜನ
ನಭಾಪುರ ಗ್ರಾಮದ ಹೆಣ್ಣುಮಕ್ಕಳಿಗೆ ತಿಂಗಳಿಗೊಮ್ಮೆ ಅಡುಗೆ ಕೆಲಸಕ್ಕೆ ವಿರಾಮ ನೀಡಿದ್ದು ಗ್ರಾಮಸ್ಥರ ಹೆಗ್ಗಳಿಕೆ. ಹೌದು ಗ್ರಾಮಸಭೆಗೆ ಕರೆದರೆ ಅಡುಗೆ ಕೆಲಸದ ನೆಪವೊಡ್ಡಿ ಸಭೆಗೆ ಗೈರಾಗುತ್ತಿರುವುದನ್ನು ಗಮನಿಸಿದ ಸಂಘದ ಹಿರಿಯರು ಹೆಣ್ಣುಮಕ್ಕಳು ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಸಭೆ ದಿನದಂದು ಬೆಳಗ್ಗೆ ಎಲ್ಲರೂ ಸೇರಿ ಶ್ರಮದಾನದ ಮೂಲಕ ಗ್ರಾಮದ ಬೀದಿಗಳನ್ನು ಸ್ವಚ್ಛಗೊಳಿಸುತ್ತಾರೆ. ನಂತರ ಊರಿನ ಗಂಡಸರೇ ಅಡುಗೆ ಮಾಡಿ ಅವರಿಗೆ ಬಡಿಸುತ್ತಾರೆ. ಆರಂಭದಲ್ಲಿ ಕೇವಲ ಅನ್ನ ಸಾರಿಗೆ ಸೀಮಿತವಾಗಿದ್ದ ಅಡುಗೆ ಇದೀಗ ಸಜ್ಜಕ, ಚಪಾತಿ ತಯಾರಿಸುವ ಮಟ್ಟಕ್ಕೆ ಬಂದು ನಿಂತಿದೆ ಎಂದು ಹೇಳಿದಾಗ ಧನಸಿಂಗ್ ಅವರ ಮುಖದಲ್ಲಿ ಅದೇನೋ ಹೆಮ್ಮೆಯಭಾವ ಎದ್ದು ಕಾಣುತ್ತಿತ್ತು. ಸಭೆ ನಂತರ ಜಾನಪದ ಹಾಡುಗಾರಿಕೆ ಮತ್ತು ನೃತ್ಯ ಪ್ರದರ್ಶನವೂ ಇರುವುದು ಇನ್ನೊಂದು ವಿಶೇಷ.
.ಬರಮೆಟ್ಟಿ ನಿಂತವರು
ಗ್ರಾಮದ ತುಕಾರಾಮ ರಾಠೋಡ್ ಓದಿದ್ದು 3 ನೇ ಇಯತ್ತೆ. ಬಡತನದಿಂದಾಗಿ ಚಿಕ್ಕ ವಯಸ್ಸಿನಲ್ಲೇ ದುಡಿಮೆ ಬೆನ್ನತ್ತಿ ಗೋವಾಕ್ಕೆ ತೆರಳಿದವರು. 40 ವರ್ಷಗಳ ನಂತರ ತವರಿನ ಸೆಳೆತಕ್ಕೆ ಸಿಲುಕಿ ಗ್ರಾಮಕ್ಕೆ ಮರಳಿ ಕೃಷಿಯಲ್ಲಿ ಖುಷಿ ಕಂಡುಕೊಂಡಿದ್ದಾರೆ. ಹಿರಿಯರಿಂದ ಬಂದ 2 ಎಕರೆ ಜಮೀನಿನಲ್ಲಿ ಜೋಳ, ಕಡಲೆ ಬೆಳೆದಿದ್ದಾರೆ. ರಿಲಾಯನ್ಸ್ ಫೌಂಡೇಷನ್ ನೀಡಿದ ತರಕಾರಿ ಬೆಳೆಗಳು ಮತ್ತು ತೆಂಗಿನಗಿಡ ನೆಟ್ಟು ತೋಟ ನಳಿನಳಿಸುವಂತಾಗಿಸಿದ್ದಾರೆ. ಒಂದಿಂಚೂ ಜಾಗೆ ವ್ಯರ್ಥವಾಗದ ಹಾಗೆ ಹಲವು ಬೆಳೆಗಳನ್ನು ಬೆಳೆದಿದ್ದಾರೆ ತುಕಾರಾಮ್.
ಜಲಸಂರಕ್ಷಣೆ
ಮಳೆ ಪ್ರಮಾಣ ಕುಂಠಿತಗೊಂಡಿದ್ದಕ್ಕೆ ಗ್ರಾಮಸ್ಥರು ಚಾವಣಿ ನೀರು ಸಂಗ್ರಹಿಸುವ ಮೂಲಕ ಜಲಸಂರಕ್ಷಣೆಗೆ ಮುಂದಾಗಿದ್ದಾರೆ. ಪ್ರತಿ ಮನೆಯವರು ಚಾವಣಿ ನೀರು ವ್ಯರ್ಥವಾಗಿ ಹರಿದುಹೋಗದಂತೆ ಮನೆಯಂಗಳದಲ್ಲಿ ನೀರು ಶೇಖರಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆ ಮೂಲಕ ನಗರವಾಸಿಗಳಿಗೆ ಸೆಡ್ಡುಹೊಡೆಯುವಂತೆ ಮಾದರಿ ಜಲಸಂರಕ್ಷಣೆ ಕಾಯಕನಿರತರಾಗಿದ್ದಾರೆ. ಉರುವಲು ಕಟ್ಟಿಗೆಯಿಂದ ಬರುವ ಹೊಗೆಯಿಂದ ಮಹಿಳೆಯರ ಆರೋಗ್ಯದಲ್ಲಿ ಏರುಪೇರಾಗುವುದನ್ನು ತಪ್ಪಿಸಲು ಬಯೋಗ್ಯಾಸ್ ಪ್ಲಾಂಟ್ ಹಾಕಿಕೊಂಡಿದ್ದಾರೆ. ಮನೆ ಹೊರಗಿನ ಜಾಗೆಯಲ್ಲಿ ಅಚ್ಚುಕಟ್ಟಾಗಿ ತಿಪ್ಪೆ ಮಾಡಿಕೊಂಡಿದ್ದಾರೆ. ಎರೆಹುಳು ಗೊಬ್ಬರವನ್ನು ತಯಾರಿಸಿಕೊಳ್ಳುತ್ತಾರೆ.
ಈ ಬಾರಿ ಮಳೆ ಕಡಿಮೆ....ಬರ ಖಚಿತ ಮುಂದೇನು? ಗುಳೆ ಹೋಗುವುದು ಪರಿಹಾರವಲ್ಲ. ಈಸಬೇಕು ಇದ್ದು ಜಯಿಸಬೇಕು. ಏನಾದರೂ ಸಾಧಿಸಬೇಕು. ನಮ್ಮ ಸಾಧನೆ ಇತರರಿಗೂ ಸ್ಫೂರ್ತಿಯಾಗಬೇಕು ಎಂದುಕೊಂಡವರು ನಭಾಪುರ ಗ್ರಾಮಸ್ಥರು. ಸಮುದಾಯದ ಸಹಭಾಗಿತ್ವ ಗ್ರಾಮದ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಗ್ರಾಮಸ್ಥರ ಸಹಭಾಗಿತ್ವ, ಸ್ಪಂದನೆಗೆ ಅಭಿವೃದ್ಧಿಯ ಸ್ವರೂಪ ಕೊಟ್ಟಿದ್ದು ರಿಲಾಯನ್ಸ್ ಫೌಂಡೇಷನ್.
ಗ್ರಾಮದಲ್ಲಿರುವ ಬಹುತೇಕರು ಶಾಲೆ ಮೆಟ್ಟಿಲು ಹತ್ತಿದ್ದಾರೆ. ಅನಕ್ಷರತೆಯ ಶಾಪದ ಪರಿಣಾಮ ಅರಿತವರು. ನಮ್ಮ ಗ್ರಾಮ ಛಂದವಾಗಿರಬೇಕು. ಸಮಸ್ಯೆಗಳು ಇರಬಾರದು. ಸಾಮಾಜಿಕ ಹಾಗೂ ಜನರ ಸ್ವಾಸ್ಥ್ಯ ಸಮೃದ್ಧಿಯಾಗಿರಬೇಕು ಎಂಬ ಕನಸನ್ನು ರಿಲಾಯನ್ಸ್ ಫೌಂಡೇಷನ್‍ನ ಸಹಾಯ, ಸಹಕಾರ ಮಾರ್ಗದರ್ಶನದಡಿ ನನಸಾಗಿಸಿಕೊಂಡವರು ಈ ಊರಿನ ಜನರು. ಗ್ರಾಮದಲ್ಲಿ ಇಂತಹ ಸುಧಾರಣೆ ರಾತ್ರೋರಾತ್ರಿ ಆಗಿದ್ದಲ್ಲ. ಗ್ರಾಮಸ್ಥರು ಒಗ್ಗಟ್ಟಿನ ಮಂತ್ರ ಪಠಿಸುವ ಮೂಲಕ ಮೂರು ವರ್ಷಗಳಲ್ಲಿ ಹಂತಹಂತವಾಗಿ ಅಭಿವೃದ್ಧಿಯ ಆಕಾಶಕ್ಕೆ ಮೆಟ್ಟಿಲು ಕಟ್ಟಿದ್ದಾರೆ. ಸಾಧನೆಯ ಛಲ ಇವರ ಯಶಸ್ಸಿನ ಹಿಂದಿನ ಗುಟ್ಟು. ಒಂದೇ ಮಾತಿನಲ್ಲಿ ಹೇಳುವುದಾದರೆ ರಿಲಾಯನ್ಸ್ ಫೌಂಡೇಷನ್ ನಭಾಪುರ ಗ್ರಾಮಸ್ಥರ ಪೇಷನ್ಸ್ ಹೆಚ್ಚಿಸುವುದರ ಜತೆಗೆ ಅವರ ಸಮಗ್ರ ಅಭಿವೃದ್ಧಿಗೆ ದಿಗ್ದರ್ಶಕನಾಗಿ ಕೆಲಸಮಾಡಿದೆ.



Post a Comment