ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಐತಹಾಸಿಕ ಅಂಜನಾದ್ರಿ ಪರ್ವತ ಹನುಮ ಜನಿಸಿದ ನಾಡು ಎಂಬಪ್ರತೀತಿ ಹೊಂದಿದೆ. ಇಷ್ಟು ದಿನ ಪ್ರಚಾರಕ್ಕೆ ಬಾರದ ಕಾರಣ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಇತ್ತು. ಸ್ಥಳೀಯರು ಹಾಗೂ ಸುತ್ತ ಜಿಲ್ಲೆಯ ಜನರು ಮಾತ್ರ ಇಲ್ಲಿಗೆ ತಪ್ಪದೇ ಬರುತ್ತಾರೆ. ಮಾಧ್ಯಮಗಳಲ್ಲಿನ ವರದಿ ಹಾಗೂ ಪ್ರಚಾರದಿಂದ ಈ ಪರ್ವತವೀಗ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಬದಲಾದ ಸನ್ನಿವೇಶದಲ್ಲಿ ಇದೀಗ ಪ್ರಮುಖರ ದರ್ಶನ ಪಡೆಯುವ ಕೇಂದ್ರವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಂಧ (ಹನುಮನಹಳ್ಳಿ) ಐತಿಹಾಸಿಕ ಪ್ರದೇಶವೂ ಹೌದು. ವಿಜಯನಗರ ಸಾಮ್ರಾಜ್ಯದ ಪ್ರದೇಶದಲ್ಲಿ ಬರುವ ಈ ಸ್ಥಳ ತುಂಗಭದ್ರಾ ನದಿ ತಟದಲ್ಲಿರುವ ಧಾರ್ಮಿಕ ಕ್ಷೇತ್ರ.
ಅಂಜನಾದ್ರಿ ಬೆಟ್ಟ ಹನುಮಂತ ಜನಿಸಿದ ಸ್ಥಳ ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಇಂತಹ ಸ್ಥಳಕ್ಕೆ ರಾಜಕೀಯ ನಾಯಕರು ಭೇಟಿ ನೀಡಿ ಅಧಿಕಾರ ಪಡೆಯುವುದಕ್ಕಾಗಿ ಪರ್ವತವನ್ನು ಏರಿ ಹರಕೆ ಹೊತ್ತರೆ ಅವರ ಬೇಡಿಕೆ ಈಡೇರುತ್ತದೆ ಎಂಬ ವಾಡಿಕೆ ಇದೆ. ಹೀಗಾಗಿ ಬಹಳಷ್ಟು ರಾಜಕೀಯ ನಾಯಕರು ಸೇರಿದಂತೆ ಚಿತ್ರ ನಟರೂ ಸಹ ಪರ್ವತ ಏರಿದ ಅನೇಕ ಉದಾಹರಣೆಗಳಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಸಹ ಈಗ ಅಂಜನಾದ್ರಿ ಬೆಟ್ಟ ಏರಿದ್ದಾರೆ. ತಮ್ಮ ಪತಿ ಪ್ರಧಾನಿಯಾಗಲಿ ಎಂಬ ಹರಕೆ ಹೊತ್ತಿದ್ದ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್ ಅವರು ಗೌಪ್ಯವಾಗಿ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ದರ್ಶನ ಪಡೆದು, ಅನಂತರ ಪಂಪಾ ಸರೋವರದಲ್ಲಿ ಮಹಾಲಕ್ಷ್ಮೀ ಪೂಜೆ ನೆರವೇರಿಸಿದರು. ಉತ್ತರ ಭಾರತದಿಂದ ದಿನ ನಿತ್ಯ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ. ಈ ಪ್ರದೇಶದಲ್ಲಿ ಕೆಲ ನಾಯಕರು ಗೌಪ್ಯವಾಗಿ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ಕೇಂದ್ರ ಸಚಿವೆ ಉಮಾ ಭಾರತಿ ಈ ಹಿಂದೆ ಅಂಜನಾದ್ರಿ ಪರ್ವತ ಏರಿ ಹನುಮನ ದರ್ಶನ ಪಡೆದಿದ್ದರು. ಅಲ್ಲದೆ ವಿಶ್ವ ಹಿಂದೂ ಪರಿಷತ್‌ನ ಪ್ರಮುಖರಾದ ಅಶೋಕ್ ಸಿಂಘಾಲ್, ಪ್ರವೀಣ್‌ಬಾಯ್ ತೊಗಾಡಿಯಾ, ಬಿಜೆಪಿ ನಾಯಕ ಗೋವಿಂದಾಚಾರ್ಯ ಭೇಟಿ ನೀಡಿದ್ದಾರೆ. ಕೇವಲ ರಾಜಕೀಯ ನಾಯಕರಲ್ಲದೆ ಖ್ಯಾತ ತೆಲುಗು ಮತ್ತು ಕನ್ನಡ ಚಿತ್ರ ನಟ, ನಿರ್ದೇಶಕರು, ಗಾಯಕರು ಅಂಜನಾದ್ರಿ ಬೆಟ್ಟ ಹತ್ತಿ ಹರಕೆ ತೀರಿಸಿದ್ದಾರೆ. ಹಾಲಿವುಡ್ ನಟ ಜಾಕಿಚಾನ್, ಅರ್ಜುನ್ ಸರ್ಜಾ, ತೆಲುಗು ಸ್ಟಾರ್ ಚಿರಂಜೀವಿ, ನಾಗಾರ್ಜುನ ಅವರಿಗೆ ನೃತ್ಯ ನಿರ್ದೇಶನ ನೀಡಿದ ರಾಘವ ಲಾರೇನ್ ಹಾಗೂ ಚಿತ್ರ ನಟ ಶ್ರೀಕಾಂತ್ ಅವರು ಅಂಜನಾದ್ರಿ ಬೆಟ್ಟ ಏರಿದ್ದಾರೆ. ಖ್ಯಾತ ಕನ್ನಡ ಚಿತ್ರ ನಟ ಅಂಬರೀಷ್, ಶಿವರಾಜಕುಮಾರ ಅವರು ಪಂಪಾ ಸರೋವರ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಮೂರು ದಶಕಗಳ ಹಿಂದೆ ಹಂಪಿ ವೀಕ್ಷಣೆಗೆ ಆಗಮಿಸುತ್ತಿದ್ದ ಪ್ರವಾಸಿಗರು ಹೊಸಪೇಟೆ ಅಥವಾ ಹಂಪಿಯಲ್ಲಿ ತಂಗುತ್ತಿದ್ದರು. ಆದರೆ ವಿರುಪಾಪುರಗಡ್ಡಿ, ಹನುಮನಹಳ್ಳಿ ಅಂಜನಾದ್ರಿ ಬೆಟ್ಟ,ಪಂಪಾ ಸರೋವರ ಈ ಸ್ಥಳಗಳ ಕುರಿತು ಅಂತರ್ಜಾಲ ಹಾಗೂ ಕೆಲವು ಆಂಗ್ಲ ಪುಸ್ತಕಗಳಲ್ಲಿ ಪ್ರಸ್ತಾಪಿಸಿದ್ದರಿಂದ ವಿದೇಶಿ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ.




Post a Comment