ಎಲ್ಲರಂತಲ್ಲ ಈ ಭಾವಜೀವಿ ನಮ್ಮ ವಿಸಿ







 ಸಾಹಿತ್ಯ ಹಾಗೂ ಸರಳೆತೆ ಮೇಳೈಸಿದ ವ್ಯಕ್ತಿತ್ವ ಎಂದರೆ ಅದು ಐರಸಂಗರದ್ದು. ಭಾವ, ತಾಳ, ಲಯ, ಧಾಟಿ ಇವರ ಕವಿತೆಗಳ ಉಸಿರು. ಬಾಳಿನ ಹಾಡಿನೊಂದಿಗೆ ಜಗದ ನೋವುಗಳನ್ನು, ನಿಸರ್ಗದ ಚೆಲುವನ್ನು ಪರಮಾತ್ಮನ ಅಪಾರ ಲೀಲೆಯನ್ನು ತಮ್ಮ ರಚನೆಯಲ್ಲಿ ಅಭಿವ್ಯಕ್ತಿಸಿದ ಕ್ರಿಯಾಶೀಲ ಬಾನುಲಿ ಕವಿ ವಿ.ಸಿ. ಐರಸಂಗ.

ಎಲ್ಲರಂತಲ್ಲ ಈ  ಭಾವಜೀವಿ ನಮ್ಮ ವಿಸಿ

ಇವತ್ತಿನ ಕಾವ್ಯದೊಳಗ ಛಂದಸ್ಸು ಇಲ್ರಿ. ಲಯವಂತೂ ಕೇಳಲೇ ಬೇಡಿ. ಕವನಗಳು ಯಾವುದೇ ಅರ್ಥವಿಲ್ಲದೇ ಅಸಂಬದ್ಧವಾಗಿ ಸಮಾಪ್ತಿಯಾಗ್ತಾವ್ರಿ…..  ಹೀಗೆಂದವರು ಧಾರವಾಡದ ಹಿರಿಯ ಕವಿ ವಿ.ಸಿ.ಐರಸಂಗ್ ಅವರು. ಯಾರು ಈ ಐರಸಂಗ್ ಅಂತೀರಾ? ಹೌದು ಹಾಗೆ ಕೇಳಲೇಬೇಕು ಏಕೆಂದರೆ ಪ್ರಚಾರದಿಂದ ಇವರು ಬಲು ದೂರ. ಇಂದಿಗೂ ಎಷ್ಟೋ ಜನರಿಗೆ ಇವರು ಅಂತಾ ಗೊತ್ತಿಲ್ಲ. 
ಕಳೆದ 8 ದಶಕಗಳಿಂದ ಕವಿಯಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಶಾಂತ, ಸರಳ ಸ್ವಭಾವದ ಈ ಸ್ನೇಹಜೀವಿ ವಿರಭದ್ರಪ್ಪ ಚನ್ನಪ್ಪ ಐರಸಂಗ. ವಿಜ್ಞಾನ ವಿಷಯ ಪದವೀಧರರಾದರೂ ಸಾಹಿತ್ಯ ಸಾಗರದಲ್ಲಿ ಧುಮುಕಿ ತಮ್ಮ ಜ್ಞಾನ ಬಲದಿಂದ ಅಗಣಿತ ಪ್ರತಿಭೆ ಹೊಂದಿದ ಕವಿ. ಸರಳ ಸಜ್ಜನಿಕೆಗೆ ಹಿಡಿದ ಕೈಗನ್ನಡಿ. ಇವರಿಗೆ ಪ್ರಶಸ್ತಿ, ಹಾರ, ತುರಾಯಿ, ವೇದಿಕೆ, ಸಮ್ಮೇಳನ ಯಾವ ಗುಂಗೂ-ಹಂಗಿಲ್ಲ. ಹಸನ್ಮುಖಿ, ಸರಳತೆಗೊಂದು ಅಲಂಕಾರ, ಬದುಕಿಗೊಂದು ವ್ಯಾಕರಣ. ಆರೋಗ್ಯವಂತ ಮನಸ್ಸಿಗೊಂದು ಛಂದಸ್ಸು, ಕವನ ಕಟ್ಟುವಲ್ಲಿ ಆ ಶಿಸ್ತಿನ ಚೌಕಟ್ಟು ಹಾಕಿಕೊಂಡವರು ನಮ್ಮ `ಭಾವಾತೀತ ಕವಿ  ಐರಸಂಗ. 
ಆಕಾಶವಾಣಿ `ಭಾವಸಂಗಮ ದ ವಿ.ಸಿ. ಐರಸಂಗ ಎಂಬ ಆ ಕವಿ ಸ್ವಾಭಿಮಾನಿ ಅಷ್ಟೇ ಅಲ್ಲ ಶ್ರೀ ಸಾಮಾನ್ಯರ ಕವಿ. ಧಾರವಾಡದ ಅತ್ತಿಕೊಳ್ಳದ ಬಳಿಯ ಶ್ರೀರಾಮನಗರ ನಿವಾಸಿ. ಹಾಗೆ ಭೇಟಿ ಮಾಡಿ ಅವರ ಕವನಗಳನ್ನು ಆಸ್ವಾದಿಸೋಣ ಅಂತಾ ಹೋದಾಗ ಅವರು ತಮ್ಮ ಬದುಕಿನ ಬಗ್ಗೆ ಹೇಳಿದ್ದು ಹೀಗೆ…. 
  ನಾನು ಚಿಕ್ಕವನಿದ್ದಾಗ ಮಾರಿಹಾಳ್ ಮಾಸ್ತರ ಎಂಬ ಕುರುಡ ಸಂಗೀತ ಶಿಕ್ಷಕರು ಮಕ್ಕಳಿಗೆ ಸಂಗೀತ ಕಲಿಸುತ್ತಿದ್ದುದನ್ನು ನೋಡ್ತಾ ಕಲಿತಿದ್ದೇ. ಮನೆ ಪರಿಸ್ಥಿತಿ ಅಷ್ಟಕ್ಕಷ್ಟೇ. ನಿಂತುಕೊಂಡೇ ಕೇಳಿ ಆಸಕ್ತಿ ಹುಟ್ಟಿಸಿಕೊಂಡಿದ್ದೆ ಎಂದು ತಮ್ಮ ಸಂಗೀತಾಸಕ್ತಿ ಬಗ್ಗೆ ಹೇಳಿದರು. ತಂದೆ ಚನ್ನಪ್ಪ ಮನೆಯಲ್ಲಿ ಭಜನೆ, ಮಗಳಾರತಿ, ದೇವರನಾಮ ಹೇಳುತ್ತಿದ್ದರಂತೆ ಆಗಿನಿಂದಲೇ ಇವರಿಗೆ ಅದರ ಬಗ್ಗೆ ಒಲವು. ಮೊದಲ ಸಲ ಅಂದರೆ 1947 ರಲ್ಲಿ ಸುಪ್ರಭಾತ ಎಂಬ ಕವನ ಸಂಕಲನ ಬರದೆ. ನನ್ನ ಕಾವ್ಯಕೃಷಿಯನ್ನು ಪ್ರೋತ್ಸಾಹಿಸಿದವರು ಗೆಳೆಯ ಆರ್.ಜಿ. ಚಿಲಕವಾಡ . ನೀವು ನೂರು ಕವನ ಬರಿರಿ ಅಂತಾ ಹೇಳಿ ಹುರುದುಂಬಿಸಿದರು ಎಂದು ಪ್ರೀತಿಯಿಂದ ನೆನೆಯುತ್ತಾರೆ ಅವರು.
ಬಾಲ್ಯ:
1930ರ ಸೆಪ್ಟೆಂಬರ್ 23 ರಂದು ಧಾರವಾಡದಲ್ಲಿ ಜನನ. ತಂದೆ ಚೆನ್ನಪ್ಪ, ತಾಯಿ ಚೆನ್ನವ್ವ. ತಂದೆಯವರದು ಕುಲಕರ್ಣಿಕಿ ಕೆಲಸ.  ಒಂದೇ ಹೆಸರಿನ ಗಂಡ-ಹೆಂಡತಿ ಇದ್ರ; ತ್ರಾಸ ಮಾಡಕೊಳ್ಳೊ ಅಥವಾ ಮಾಡೋ ಮಕ್ಕಳಿಗೆ ಔಷಧಿ ಕುಡಿಸಲಿಕ್ಕೇ ಅಂತ ನೂರಾರು ಜನ ನಮ್ಮ ಮನೀಗೆ ಬರ್ತಿದ್ರು. ನಮ್ಮ ಅವ್ವ-ಅಪ್ಪ ಔಷಧ ಕೊಟ್ಟ ಕೂಡಲೇ ಸುಮ್ಮನಾಗ್ತಿದ್ವು!  ಕೌತುಕದಿಂದ ವಿವರಿಸುತ್ತಾರೆ ಕವಿ ಐರಸಂಗ . ಇವರ ಮಗ ಭಾರತೀಯ ವಾಯು ಸೇನೆಯಲ್ಲಿ ಅಧಿಕಾರಿ;  ಸ್ವಯಂ ನಿವೃತ್ತಿ ಪಡೆದು  ಬೆಂಗಳೂರಿನ ಎಚ್.ಎ.ಎಲ್ ನಲ್ಲಿ ಉದ್ಯೋಗಿ. ಇಬ್ಬರು ಹೆಣ್ಣು ಮಕ್ಕಳು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
ಆಡು ಮುಟ್ಟದ ಸೊಪ್ಪಿಲ್ಲ. ಐರಸಂಗರು ಮಾಡದ ಸಾಹಿತ್ಯ ಕೃಷಿ ಇಲ್ಲ ಎಂತಲೇ ಹೇಳಬಹುದು. ಕವಿ ಐರಸಂಗರ ಕವನಗಳ ವಿಷಯವ್ಯಾಪ್ತಿ ಅಗಾಧವಾದುದು. ಪ್ರಣಯ, ವಿರಹ, ಭಕ್ತಿ, ದೇಶಭಕ್ತಿ, ನಾಡಗೀತೆ, ಪೌರಾಣಿಕ, ಆಧ್ಯಾತ್ಮಿಕ,  ಮಕ್ಕಳ ಸಾಹಿತ್ಯ, ವಿಡಂಬನ, ನೃತ್ಯ ರೂಪಕ,   ಪ್ರಾರ್ಥನೆ, ಕಥಾರೂಪಕ, ಜಾನಪದ, ಪ್ರಾರ್ಥನೆ ಹೀಗೆ 36 ಕವನ ಸಂಕಲನಗಳನ್ನು ತಲಾ ಒಂದು ಸಾವಿರ ಪ್ರತಿಯಂತೆ ಮುದ್ರಿಸಿ ಅವರು ಸಹೃದಯರಿಗೆ ತಲುಪಿಸುವ, ಮೂಲಕ ಸಂಸ್ಕೃತಿ ಪೋಷಣೆಯ ಕೈಂಕರ್ಯದಲ್ಲಿ ನಿರತರಾಗಿದ್ದಾರೆ. ಬಿಡುವಿನ ವೇಳೆ ತಬಲಾ ಬಾರಿಸುವುದರಲ್ಲಿ ತಲ್ಲೀನರಾಗುತ್ತಾರೆ. ಇವರ ಕವನ ಸಂಕಲನಗಳು ಹಾಡು ಕಲಿಯಲಿಚ್ಛಿಸುವ ಮಕ್ಕಳಿಗಾದರೆ ಉಚಿತ. ದೊಡ್ಡವರಿಗಾದರೂ ಇಷ್ಟೇ ಎಂಬ ನಿಯಮವಿಲ್ಲ; ಕೊಟ್ಟಷ್ಟು ಹಣ ಪಡೆಯುತ್ತಾರೆ. 
ಅವರು ಬರೆದ ಕವನಗಳ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ. ಕೃಷ್ಣಾ ಹಾನಗಲ್, ಇಂದಿರಾಬಾಯಿ ಬೆಂಗಳೂರ, ಅನುರಾಧಾ ಧಾರೇಶ್ವರ, ಮಾಧವ ಗುಡಿ, ಸಂಗೀತಾ ಕಟ್ಟಿ, ಭಾಲಚಂದ್ರ ನಾಕೋಡ, ಶ್ರೀಪಾದ ಹೆಗಡೆ, ಶಾಂತಾರಾಮ ಹೆಗಡೆ, ಪರಮೇಶ್ವರ ಹೆಗಡೆ, ಶ್ರೀಕಾಂತ ಕುಲಕರ್ಣಿ, ಸೇರಿದಂತೆ ಅನೇಕ ಖ್ಯಾತನಾಮ ಗಾಯಕರು, ಸಂಗೀತಗಾರರು, ಸಂಗೀತ ಸಂಯೋಜಕರು ಕವಿ ವಿ.ಸಿ. ಐರಸಂಗ ಅವರ ಕವನ, ಭಾವಗೀತೆಗಳನ್ನು ಹಾಡಿ ಪ್ರಚುರಪಡಿಸಿದ್ದಾರೆ. 
ಸೇವಾ ಮನೋಭಾವ: 
80 ನೇ ವಯಸ್ಸಿನಲ್ಲಿದ್ದರೂ ಇವರ ಆಸಕ್ತಿ ಕುಂದಿಲ್ಲ. ಚಿಕ್ಕಮಕ್ಕಳಿಗೆ ಸಂಗೀತ ಹೇಳಿಕೊಡುವುದೆಂದರೆ ಇವರಿಗೆ ಇನ್ನಿಲ್ಲಿದ ಆಸಕ್ತಿ.  ಇಲ್ಲಿ 5 ರಿಂದ 8ನೇ ತರಗತಿಯ ಮಕ್ಕಳಿಗೆ ಉಚಿತವಾಗಿ ಟ್ಯೂಷನ್ ಇಲ್ಲಿ ಗಡಿಯಾರ, ಸೈಕಲ್ ರಿಪೇರಿ ಮಾಡಲಾಗುವುದು ಇದು ಅವರ ಮನೆಯ ಗೋಡೆಯ ಮೇಲೆ (ಅವರ ಮೊಬೈಲ್ ಸಂಖ್ಯೆ: 9844856922 ಸಮೇತ) ಬರೆದ ಸಾಲುಗಳಿವು. ಟ್ಯೂಷನ್ ಹಾಗೂ ರಿಪೇರಿ ಕೆಲಸಕ್ಕೆ ಹಣ ಸ್ವೀಕರಿಸುವುದಿಲ್ಲ.  
ಒಂದು ಅತ್ಯಂತ ಹಳೆಯ ಸೈಕಲ್. ಯಾವತ್ತೂ ಆ ಸೈಕಲ್ ಹತ್ತಿ ಸಂಚಾರಕ್ಕೆ ಹೊರಡುವ ಓರ್ವ ಸೀದಾಸಾದಾ ಮನುಷ್ಯ. ಸೈಕಲ್ ಹಿಡಿಯ ಎರಡೂ ಬದಿಗೆ ತೂಗು ಹಾಕಲಾದ ಕೈಚೀಲಗಳು. ಅದರಲ್ಲಿ ತಮ್ಮ ಪುಸ್ತಕಗಳು.
ಸನ್ಮಾನ:
ಕವಿ ಐರಸಂಗ ಅವರ ಈ ಸಾಹಿತ್ಯ ಸೇವೆ ಅರಸಿ ಹಲವು ಪ್ರಶಸ್ತಿಗಳು ಬಂದಿವೆ. ಆ ಮೂಲಕ ಈ ಪ್ರಶಸ್ತಿಗಳು ತಮ್ಮ ಘನತೆ ಹೆಚ್ಚಿಸಿಕೊಂಡಿವೆ.   ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದಿಚುಂಚನಗಿರಿಯ ಚುಂಚಶ್ರೀ ಪ್ರಶಸ್ತಿ, ಶಿಕ್ಷಣ ಸಿರಿ, ಚಿಂತನ ಶ್ರೀ, ಶಾರದಾ-ಶಾಲ್ಮಲಾ, ಸುವರ್ಣ ಶ್ರೇಷ್ಠ ಹಾಗೂ ಡಿವಿಜಿ ಪ್ರತಿಷ್ಠಾನ ಪ್ರಶಸ್ತಿಗಳು ಅರಸಿ ಬಂದಿವೆ. ಡಾ. ವೀರಣ್ಣ ರಾಜೂರ ಅವರ ಮಾರ್ಗದರ್ಶನದಲ್ಲಿ ಕವಿವಿ ಕನ್ನಡ ಅಧ್ಯಯನ ಪೀಠದ ವಿಜಯ ಕುಮಾರಿ ಅವರು ವಿ.ಸಿ. ಐರಸಂಗ ಅವರ ಕವನ ಸಾಹಿತ್ಯದ ಬಗ್ಗೆ 2003ರಲ್ಲಿ ಎಂ.ಫಿಲ್ ಪದವಿಗಾಗಿ ಶಾಸ್ತ್ರೀಯ ಅಧ್ಯಯನ ಕೈಗೊಂಡಿದ್ದಾರೆ. ಕಿತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಫ್.ಡಿ. ಗದ್ದಿಗೌಡರ ಅವರು ಕವಿವಿಯ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕರಾದ ಡಾ. ಚೆನ್ನಕ್ಕ ಪಾವಟೆ ಅವರ ಮಾರ್ಗದರ್ಶನದಲ್ಲಿ ವಿ.ಸಿ. ಐರಸಂಗ ಅವರ ಕನ್ನಡ ಸಾಹಿತ್ಯಕ್ಕೆ ಕೊಡುಗೆಗಳು ಎಂಬ ವಿಷಯವಾಗಿ ಕವನ ಸಾಹಿತ್ಯವನ್ನಾಧರಿಸಿ ಪಿ.ಎಚ್.ಡಿ. ಅಧ್ಯಯನ (2009) ಕೈಗೊಂಡಿದ್ದಾರೆ. 
ಪ್ರಮುಖ ಕವನ ಸಂಲನಗಳು: ಸುಧಾ ಸರಿತ, ನವರಸ, ಉದಯಗೀತ, ಗುಬ್ಬಿಯ ಗೂಡು, ಕಾವ್ಯಾಂಜಲಿ, ಮೋಹಿನಿ ಭಸ್ಮಾಸುರ, ಕರುನಾಡ ಮುತ್ತುಗಳು, ಗೀತ ಮಂಜರಿ, ಕಾವ್ಯ ರತ್ನ, ಮಕ್ಕಳ ಹಾಡು, ಕಾವ್ಯ ವಿಲಾಸ, ಶೃಂಗಾರ ಕಾವ್ಯ, ಕಾವ್ಯ ಕುಸುಮ, ನಲ್ಲೆಯೂರಿಗೆ, ಕಾವ್ಯಶ್ರೀ, ಮನದನ್ನೆ ಬರುತಿಹಳು, ಬರೆದವನು ನಾನಲ್ಲ, ಕಾವ್ಯ ಸೌರಭ ಪ್ರಮುಖವಾದವು. 
ಪ್ರತಿಭೆಯ ಗಣಿ
1947 ರಲ್ಲಿ ಮುಲ್ಕಿ -ಪಿಎಸ್‍ಎಲ್‍ಸಿ ಪರೀಕ್ಷೆ ಪ್ರಥಮ ರಾಂಕ್‍ನೊಂದಿಗೆ ಪಾಸು ಮಾಡಿದ ಕವಿ ಐರಸಂಗ ಅವರು, 1949ರಲ್ಲಿ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲ್‍ನಿಂದ ಎಸ್.ಎಸ್.ಎಲ್.ಸಿ ಹಾಗೂ 1953ರಲ್ಲಿ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಿಂದ ಬಿ.ಎಸ್ಸಿ (ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ) ವಿಷಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಪದವಿಗಳಿಸಿದ ಶ್ರೇಯ ಅವರದ್ದು. ಕುಂದಗೋಳದ ಹರಭಟ್ಟ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿ 1954 ರಲ್ಲಿ ವೃತ್ತಿ ಜೀವನ ಆರಂಭಿಸಿದ ಕವಿ ಐರಸಂಗ, 1988ರ ವರೆಗೆ ರೈಲ್ವೆ ಇಲಾಖೆಯಲ್ಲಿ ಚೀಫ್ ಕ್ಲಾರ್ಕ್ ಆಗಿ ಸುದೀರ್ಘ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. 

Post a Comment

Distributed by Presul Info Tech

Distributed by Gooyaabi Templates | Designed by Presul Info Tech