ಅದು ಗರ್ಭಿಣಿಯೊಬ್ಬಳು ನಡುಗಡ್ಡೆಯಿಂದ ಈಜಿ ದಡ ಸೇರಿದ ನಟ್ಟ ನಡುವಿನ ನಡುಗಡ್ಡೆಯ ಊರು. ಅಲ್ಲಿ ಇಲ್ಲಿಯವರೆಗೂ ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿಯೂ ಕಾಲಿಟ್ಟಿರಲಿಲ್ಲಾ ಆದ್ರೆ ಈಗ ಜಿಲ್ಲಾಡಳಿತವೆ ಎಚ್ಚೆತ್ತುಕೊಂಡು ಊರಿನ ಮಂದಿಯ ಆರೋಗ್ಯದ ಮೇಲೆ ಗಮನ ಇರಿಸಲು ಮುಂದಾಗಿದೆ. ನಿಜಕ್ಕೂ ಇದೊಂದು ಉತ್ತಮ ಬೆಳವಣಿಗೆ ಹೊರಜಗತ್ತನ್ನೇ ನೋಡದ ಊರ ಮಂದಿಗೆ ಇದೀಗ ಸರ್ಕಾರದ ಸಂಪರ್ಕ ಸಾಧ್ಯವಾಗಿದೆ.
ಸರಕಾರದ ಕಣ್ಣು ತೆರೆಸಿದ ಯಲ್ಲವ್ವ
ನಾವು ಎಷ್ಟೇ ಮುಂದುವರಿದಿದ್ದೇವೆ ಎಂದುಕೊಂಡರೂ ಇಂದಿಗೂ ನಮ್ಮ ಮಧ್ಯೆ ಸೌಲಭ್ಯವಂಚಿತ ಅನೇಕ ಗ್ರಾಮಗಳು, ನಡುಗಡ್ಡೆಗಳು ಸಾಕಷ್ಟು ಕಾಣಸಿಗುತ್ತವೆ. ಆಳುವವರ ಕಣ್ಣಿಗೆ ಇವ್ಯಾವು ಕಾಣುವುದೇ ಇಲ್ಲ. ಗಮನಕ್ಕೆ ಬಂದರೂ ಇಚ್ಛಾಶಕ್ತಿಯ ಕೊರತೆ ಪರಿಣಾಮ ಅಭಿವೃದ್ಧಿ ಆಗುವುದಿಲ್ಲ. ಇದಕ್ಕೊಂದು ಉತ್ತಮ ನಿದರ್ಶನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ
ಇದು ನೆರೆಯ ಆಂದ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಊರು. ಸುಮಾರು 120 ಮತದಾರರು ಹಾಗೂ 300 ಜನಸಂಖ್ಯೆ ಇಲ್ಲಿದೆ. ಇಲ್ಲಿನ ಜನರು ಅದೇಷ್ಟೊ ವರ್ಷಗಳಿಂದ ಹೊರ ಜಗತ್ತಿನ ಸಂಪರ್ಕವಿಲ್ಲದೇ ಇದ್ದು, ಹಾಗೆನಾದ್ರೂ ಹೊರಗಡೆ ಬರಬೇಕು ಎಂದ್ರೆ ಈಸಗಾಯಿ ಬಳಸಿಕೊಂಡು ಈಜಿಕೊಂಡು ಬರಬೇಕಾದ ಅನಿವಾರ್ಯತೆ ಇಂದಿಗೂ ಈ ಊರಿನ ಮಂದಿಗೆ ಇದೆ. ಹೀಗಾಗಿ ಈ ಊರಿನಲ್ಲಿ 100 ಕ್ಕೂ ಹೆಚ್ಚು ಮಂದಿ ಉದ್ಯೋಗ ಅರಸಿಕೊಂಡು ಗುಳೆ ಹೋಗಿದ್ದಾರೆ. ಅಂತಹ ಪರಿಸ್ಥಿತಿ ನೀಜಕ್ಕೂ ದಯನೀಯ ಸ್ಥಿತಿ ಇಲ್ಲಿನ ಜನರಿಗೆ ಇದೆ. ಆದ್ರೆ ಇಂತಹದೇ ಊರಿನಲ್ಲಿ ಇಡಿ ರಾಜ್ಯದ ಗಮನ ಸೆಳೆದಿದ್ದು ಗರ್ಭಿಣಿ ಮಹಿಳೆ ಯಲ್ಲವ್ವ. ಪ್ರಸವದ ಸಮಸ್ಯೆಯಿಂದ ವೈದ್ಯರ ಹತ್ತಿರ ತೋರಿಸಿಕೊಳ್ಳಲು ಬಂದ ಈ ಗರ್ಭಿಣಿ ಮಹಿಳೆ ಇಡೀ ಕೃಷ್ಣಾ ನದಿಯನ್ನು ಈಜಿಕೊಂಡು ದಡ ಸೇರಿ ಮತ್ತೆ ತನ್ನ ಊರು ನಿಲಕಂಠರಾಯನಗಡ್ಡಿಗೆ ಹೋಗಿದ್ದಳು. ಈಕೆ ಸಾಹಸದ ಬಗ್ಗೆ ರಾಜ್ಯದ ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.
ಆಕೆಯ ಸಾಧನೆಯಿಂದ ಪ್ರೇರಪಣೆಗೊಂಡಿರುವ ಯಾದಗಿರಿ ಜಿಲ್ಲಾಡಳಿತ ಇದೀಗ ಹೊಸದೊಂದು ಹೆಜ್ಜೆ ಇಟ್ಟಿದೆ. ಇನ್ನು ಮುಂದೆ ನೀಲಕಂಠರಾಯನ ಗಡ್ಡಿಯ ಜನರು ಈ ರೀತಿಯ ಸಮಸ್ಯೆ ಆದಾಗ ಈಜಿಕೊಂಡು ಬಂದ್ರೆ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿ ಸಾವನ್ನಪ್ಪಬಹುದು ಎನ್ನುವ ನಿಟ್ಟಿನಲ್ಲಿ ಊರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಕಳಿಸಿ ಸಮಸ್ಯೆಗಳ ಬಗ್ಗೆ ಸರ್ವೆ ಮಾಡಿದೆ. ತಹಶೀಲ್ದಾರ ಅರುಣ ಕುಲಕರ್ಣಿ, ಹಾಗೂ ವೈದ್ಯ ಡಾ. ವೀಣಾ ನೇತೃತ್ವದ ಅಧಿಕಾರಿಗಳ ತಂಡ ಸುಮಾರು 3 ಕಿ.ಮೀ ದೂರದಲ್ಲಿ ಕಲ್ಲು ಮುಳ್ಳುಗಳ ನಡುವೆ ನಡೆದು, ಗ್ರಾಮಸ್ಥರು ಅನುಭವಿಸುತ್ತಿದ್ದ ಸಮಸ್ಯೆಗಳನ್ನು ಆಲಿಸಿದೆ. ಮಕ್ಕಳು ಹಿರಿಯರು ಹಾಗೂ ಊರಿನ ಮಂದಿ ಆರೋಗ್ಯ ತಪಾಸಣೆ ಮಾಡಿದ ಅಧಿಕಾರಿಗಳ ತಂಡ, ಇನ್ನು ಮುಂದೆ 15 ದಿನ ಹಾಗೂ ತಿಂಗಳಿಗೆ ಒಮ್ಮೆಯಾದ್ರೂ ಬಂದು ಹೋಗಿ ಆರೋಗ್ಯ ತಪಾಸಣೆ ಮಾಡುತ್ತೇವೆ ಎನ್ನುವ ಭರವಸೆಯನ್ನು ಕೊಟ್ಟಿದೆ.ಈ ನುಡಗಡ್ಡೆಗೆ ಶಾಶ್ವತವಾದ ಸೇತುವೆ ಮಾಡುವ ಬಗ್ಗೆ ಇಲ್ಲಿಯವರೆಗೂ ಆಯ್ಕೆಯಾದ ಯಾವೊಬ್ಬ ಜನಪ್ರತಿನಿಧಿಗಳು ಮುಂದಾಗಿಲ್ಲಾ. ಹೀಗಾಗಿ ಇಲ್ಲಿನ ಮಂದಿಗೆ ಜನಪ್ರತಿನಿಧಿಗಳ ಮೇಲಿನ ಭರವಸೆ ಸಾಕಷ್ಟೂ ಹುಸಿಯಾಗಿ ಪರಿಣಮಿಸಿದೆ. ಹೀಗಾಗಿ ನಡುಗಡ್ಡೆಯ ಮಂದಿಗೆ ಶಾಶ್ವತವಾದ ಸೇತುವೆ ಭಾಗ್ಯವನ್ನು ಸರ್ಕಾರ ಇಲ್ಲಿ ಕಲ್ಪಿಸಿಕೊಡಬೇಕಿದೆ. ಅಂದಾಗ ಮಾತ್ರ ಈ ನೊಂದ ಜೀವಗಳ ಬಾಳು ಹಸನಾಗಿ ಮತ್ತೆ ಉಜ್ವಲ ಭವಿಷ್ಯದತ್ತ ತಮದೇ ಆದ ರೀತಿಯಲ್ಲಿ ಚಿತ್ತ ಹರಿಸಲು ಸಹಕಾರಿಯಾಗುತ್ತೆ.





Post a Comment