40 ದಿನಗಳವರೆಗೆ ಜನರಿಗೆ ಭೀತಿ ಹುಟ್ಟಿಸಿದ್ದ ಪಂಡರವಳ್ಳಿ ನರಭಕ್ಷಕ ಹುಲಿ ಗುಂಡೇಟಿಗೆ ಬಲಿ ಆಗುವವರೆಗೆ ಜನ ಅದನ್ನು ಆದಷ್ಟು ಬೇಗ ಹೊಡೆದುರುಳಿಸಬೇಕು ಎನ್ನುತ್ತಿದ್ದರು. ಆದರೆ ಅದರ ದೇಹ ನೋಡುತ್ತಿದ್ದಂತೆಯೇ ಪಾಪ ಕೊಲ್ಲಬಾರದಿತ್ತು. ಜೀವಂತ ಹಿಡಿದು ಮೃಗಾಲಯಕ್ಕೆ ಕಳಿಸಬಹುದಿತ್ತು ಎನ್ನುವ ಕನಿಕರದಿಂದ ಕೂಡಿದ ಮಾತುಗಳು ಹುಲಿ ಬಗ್ಗೆ ಇದ್ದ ಪ್ರೀತಿಯ ದ್ಯೋತಕವಾಗಿತ್ತು.
ಪಂಡರವಳ್ಳ ಹುಲಿ ಸಾವು; ನೈತಿಕ ಹೊಣೆ ಯಾರದ್ದು?
ಹುಟ್ಟು ಅನಿಶ್ಚತತೆ. ಸಾವು ಖಚಿತ. ಇದು ಜಗತ್ತಿನ ಸಕಲ ಜೀವರಾಶಿಗೂ ಅನ್ವಯಿಸುತ್ತದೆ. ಆದರೆ ಬಾಳಿಬದುಕಬೇಕಾಗಿದ್ದ ಸಮಯದಲ್ಲಿ ಕಾಲನ ಕರೆ ಬಂದಾಗ ಅದೂ ತನಗೆ ಗೊತ್ತಿಲ್ಲದ ಸ್ಥಳದಲ್ಲಿ ಇಹಲೋಕತ್ಯಜಿಸುವುದು ಎಂಥ ಜೀವಿಗೂ ಊಹಿಸದ ವಿದ್ಯಮಾನ. ಇದಕ್ಕೆ ನಮ್ಮ ಪಂಡರವಳ್ಳಿ ಹುಲಿಯೂ ಹೊರತಾಗಿಲ್ಲ. ಹುಟ್ಟಿದ್ದು ಅದೆಲ್ಲೋ ಭದ್ರಾ ಕಾಡಿನಲ್ಲಿ, ಸಾವನ್ನಪ್ಪಿದ್ದು ಖಾನಾಪುರದ ಕಾಡಿನಲ್ಲಿ. ಅದು ಸಹಜ ಸಾವು ಬೇರೆಯಲ್ಲ. ಆಹಾರ ಮತ್ತು ತನ್ನವರ ಅರಸುತ್ತ ದಿನವೂ ಒಂದೊಂದೆಡೆ ತಿರುಗುತ್ತಿದ್ದ ಆ ಪಂಡರವಳ್ಳಿ ವ್ಯಾಘ್ರ ಕೊನೆಗೆ ಗುಂಡಿನ ದಾಳಿಗೆ ಸತ್ತದ್ದು ಇದೀಗ ಇತಿಹಾಸವಾದರೂ ಅದರ ಸಾವು ಚಿರಸ್ಥಾಯಿ.ತಾಯಿಯಿಂದ ಬದುಕುವ ಕಲೆ ಕಲಿಯಬೇಕಾದ ವಯಸ್ಸಿನಲ್ಲಿ ಸಾವನ್ನಪ್ಪಿದ ಈ ಹುಲಿ ತುಂಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಹಿಂದೆ ಇದೇ ಹುಲಿ ಪ್ರವಾಸಿಗರ ಕಾರು ಬೆನ್ನತ್ತಿ ಸುದ್ದಿಯಲ್ಲಿದ್ದ ಈ ಹುಲಿ ಈ ತರಹದ ತುಂಟತನದಿಂದ ಜೀವ ತೆತ್ತಿದ್ದು ವಿಪರ್ಯಾಸ.
ಪಶ್ಚಿಮಘಟ್ಟದ ಸೆರಗಿನಡಿ ಬರುವ ಗಡಿನಾಡು ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ದಟ್ಟಡವೆ. ಕೆಳಗಿಳಿದರೆ ಕೃಷ್ಣಾಪುರ, ಮುಂದೆ ಸಾಗಿದರೆ ತಳೇವಾಡಿ ಅರಣ್ಯ ಪ್ರದೇಶ. ಭೀಮಗಡ ಅಭಯಾರಣ್ಯದ ಕೊಂಗಳಾ ಬಳಿ ಪಂಡರವಳ್ಳಿಯ ಹುಲಿಯ ಜೀವನಗಾಥೆ ಅಂತ್ಯವಾಗಿ ವರ್ಷ ಉರುಳಿದೆ. ಸತ್ತ ಹುಲಿ ಮತ್ತೆದ್ದು ಬರಲಾರದು. ಆದರೆ ಹುಲಿಯ ವಿಷಯದಲ್ಲಿ ಕಳೆದು ಹೋಗಿದ್ದ ವಿವೇಚನೆಗಳನ್ನು ಮಾತ್ರ ಖಂಡಿತ ಮತ್ತೆ ಜೀವಂತಗೊಳಿಸಿಕೊಳ್ಳಬಹುದು. ಹಾಗೆ ಮಾಡಿದಲ್ಲಿ ಮತ್ತೆ ಇಂಥ ಪ್ರಮಾದಗಳಿಗೆ ಅವಕಾಶವಾಗದು.
ಇದು ಕೇವಲ ಪಂಡರವಳ್ಳಿಯ ಹುಲಿ ವಿಚಾರದಲ್ಲಿ ಮಾತ್ರವಲ್ಲ. ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ನುಗ್ಗಿ ಅವಾಂತರ ಎಬ್ಬಿಸುವ ಎಲ್ಲ ವನ್ಯಜೀವಿಗಳ ವಿಷಯದಲ್ಲೂ ಅನ್ವಯಿಸುತ್ತದೆ. ಚಿಕ್ಕಮಗಳೂರು ಕಾಡಿನಲ್ಲಿ ಮಹಿಳೆಯನ್ನು ಕೊಂದ ನಂತರದ ವಿದ್ಯಮಾನಗಳೆಲ್ಲ ಹುಲಿಯ ಜೀವಕ್ಕೆರವಾಗುವ ಸಂದರ್ಭಗಳನ್ನೇ ಸರಣಿಯಾಗಿ ಸೃಷ್ಟಿಸಿದವು. ನರ ಹಂತಕ ಹುಲಿ ನರಭಕ್ಷಕವಾಯಿತು. ಭಕ್ಷಿಸಬೇಕಾದ ಕಾಡು ಪ್ರಾಣಿಗಳನ್ನು ಬಿಟ್ಟು ನಾಡಿನ ಹಸು, ಕುರಿ, ಕುದುರೆಗಳನ್ನು ತಿಂದು ತೇಗಿತು. ಪ್ರತಿ ಹಂತದಲ್ಲಿ `ಅಪರಾಧಿ' ಎನಿಸಿತು. ಈ ಎಲ್ಲ ತಪ್ಪಿಗೆ ದಕ್ಕಿದ್ದು ಸಾವಿನ ಶಿಕ್ಷೆ.
ಆದರೆ ಚಿಕ್ಕಮಗಳೂರಿನಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿ ಕೊಂದಾಗ ಅರಣ್ಯ ಇಲಾಖೆ, ಸಂಬಂಧಿಸಿದ ಪ್ರಾಧಿಕಾರಗಳು, ಎನ್‍ಜಿಒಗಳು ಅಧ್ಯಯನಶೀಲತೆಯ ಆಧಾರದಲ್ಲಿ ಪರಾಮರ್ಶಿಸಿ ನಿರ್ಧಾರ ತಳೆದಿದ್ದರೆ ಇಷ್ಟೆಲ್ಲ ದೊಡ್ಡ ಪ್ರಹಸನಕ್ಕೆ ಅವಕಾಶವೇ ಇರುತ್ತಿರಲಿಲ್ಲವೇನೋ. ಚಿಕ್ಕಮಗಳೂರಿನಲ್ಲಿ ಮಹಿಳೆಯನ್ನು ಕೊಲ್ಲುವಾಗ ಅದರ ಉದ್ದೇಶ, ಮನಃಸ್ಥಿತಿ, ಅನಿವಾರ್ಯತೆಗಳು ಏನಿದ್ದವು ಎಂಬುದನ್ನು ಮನಗಾಣಬೇಕಿತ್ತು ಎಂಬ ವಿಷಯ ಈಗ ಹೆಚ್ಚು ಪ್ರಸ್ತುತ. ಸ್ವಯಂ ರಕ್ಷಿಸಿಕೊಳ್ಳುವುದು, ಅದಕ್ಕಾಗಿ ಇನ್ನೊಂದು ಜೀವಿಯ ಮೇಲೆ ಎರಗುವುದು, ಬೇಟೆಯಾಡಿ ತಿನ್ನುವುದು ಹುಲಿಯ ಸಹಜ ಸ್ವಭಾವ. ಈ ಹುಲಿಯ ವಿಷಯದಲ್ಲಿ ಅದನ್ನು ಅಪರಾಧವೆಂಬ ಏಕದೃಷ್ಟಿಯಿಂದ ಪರಿಗಣಿಸಿ ಪರಿಹಾರ ಕಂಡುಕೊಳ್ಳಲು ಯತ್ನಿಸಿದಂತಿದೆ. ಇಲ್ಲಿ ಅಪವಾದಗಳೇ ಹುಲಿಯನ್ನು ಅಪರಾಧಿಯನ್ನಾಗಿಸಿದ್ದು ನಿಜ. ಕೆಲ ಕಾಲಾವಕಾಶದೊಂದಿಗೆ ಅದರ ಸ್ವಭಾವದ ಸ್ಥೂಲ ಅಧ್ಯಯನ ನಡೆಸಿ ನಿರ್ಧಾರ ಕೈಗೊಂಡಿದ್ದರೆ ಇಷ್ಟೊಂದು ದೊಡ್ಡ ಮಟ್ಟದ ಎಡವಟ್ಟು ಆಗುತ್ತಿರಲಿಲ್ಲ. ಬೇಟೆಯ ತರಬೇತಿಯ ಕೊರತೆ, ಅಪರಿಚಿತ ಪ್ರದೇಶ, ಸಂತಾನೋತ್ಪತ್ತಿಯ ಸಂದರ್ಭ, ಮನುಷ್ಯರಿಂದ ಆಗಾಗ ನಿಯಂತ್ರಣ, ಸ್ವಚ್ಛಂದ ಜೀವಿಯ ಕತ್ತಿಗೆ ಅನಪೇಕ್ಷಿತವಾಗಿ ಬಿಗಿದ ರೆಡಿಯೋ ಕಾಲರ್ ಕಿರಿಕಿರಿ ಇವೆಲ್ಲವೂ ಹುಲಿ ಬುದ್ಧಿಯ ವೈಪರೀತ್ಯಕ್ಕೆ ಕಾರಣವಾದವು ಎಂಬ ಅಂಶ ಒಪ್ಪುವಂಥದ್ದು. ವನ್ಯ ಜೀವಿಗಳ ವಿಷಯದಲ್ಲಿ ಮಾನವ ನಿರ್ಧಾರಗಳು ಹಗ್ಗದ ಮೇಲಿನ ನಡಿಗೆಯಷ್ಟು ಸೂಕ್ಷ್ಮವಾಗಿರಬೇಕು ಎಂಬುದನ್ನು ಈ ಘಟನೆ ಕಲಿಸಿದೆ.
ಅರಣ್ಯ ಇಲಾಖೆ ಕೂಡ ಇನ್ನಷ್ಟು ಸುಸಜ್ಜಿತವಾಗಬೇಕಿದೆ. ವನ್ಯಜೀವಿಗಳ ವಿಷಯದಲ್ಲಿ ಇಲಾಖೆಯಲ್ಲೇ ತಜ್ಞರ ಸೃಷ್ಟಿಯಾಗಬೇಕಿದೆ. ತಂತ್ರಜ್ಞಾನ ಎಷ್ಟು ಬೆಳೆದರೂ ಕೊನೆಗೆ ಹುಲಿಯ ಸುಳಿವು ನೀಡಲು ಚಾಮರಾಜನಗರದ ಸೋಲಿಗರೇ ಬೇಕಾಯಿತು. ರೆಡಿಯೋ ಕಾಲರ್ ತಂತ್ರಜ್ಞಾನ ಸೋಲು ಕಂಡು ಪರಂಪರಾಗತ ಪದ್ಧತಿ ಕೊನೆಗೆ ಗೆದ್ದಿತು. ಸಾಮಾಜಿಕ ಅರಣ್ಯ ಹಾಗೂ ವನ್ಯಜೀವಿ ವಿಭಾಗಗಳಂತೆ ವನ್ಯಜೀವಿ ವೈದ್ಯಕೀಯ ವಿಭಾಗವೊಂದನ್ನು ಇಲಾಖೆಯಲ್ಲಿ ಪ್ರತ್ಯೇಕವಾಗಿ ತೆರೆದರೆ ಇಂಥ ಘಟನೆಗಳನ್ನು ಸಮರ್ಥವಾಗಿ ಇಲಾಖೆಯೇ ಜವಾಬ್ದಾರಿಯುತವಾಗಿ ನಿರ್ವಹಿಸಲು ಸಾಧ್ಯ ಎಂಬುದು ಸಾಂದರ್ಭಿಕ ಸತ್ಯಾಸತ್ಯತೆಗಳಿಂದ ಸಾಬೀತಾಗಿದೆ.
ಹುಲಿ ವಿಚಾರದಲ್ಲಿ ರಾಜಕೀಯಗಳು ಬೆರೆತುಕೊಂಡಿದ್ದು ವಿಷಾದನೀಯ. ವಿನಾಶದ ಅಂಚಿನಲ್ಲಿರುವ ಸಂತತಿಯೊಂದರ ಕೊಂಡಿಯೊಂದು ಕಳಚಿ ಹೋಗುವಾಗ ವೈಯಕ್ತಿಕ ಜವಾಬ್ದಾರಿ ಮುಖ್ಯವಾಗಬೇಕು. ಆರೋಪಕ್ಕಿಂತ ಸಲಹೆಗಳು, ಪರಿಹಾರೋಪಾಯಗಳು ಹೆಚ್ಚು ಪ್ರಸ್ತುತವಾಗಬೇಕಿತ್ತು. ಅದನ್ನು ಉಳಿಸಿ ಬೋನಿನಲ್ಲಿಟ್ಟು ಪಾಲಿಸಬಹುದಿತ್ತು ಎಂಬ ಸಲಹೆಗಳು ಹುಲಿ ಹತವಾದ ನಂತರ ಕೇಳಿಬಂದಿವು. ಹುಲಿ ಸಾಯುವ ಮೊದಲು ಈ ಅಭಿಪ್ರಾಯ ಘಂಟಾಘೋಷವಾಗಿ ಕೇಳಿಬಂದಿದ್ದರೆ ಕಳೆದು ಹೋದದ್ದಕ್ಕಾಗಿ ಮರುಗುವ ಅಗತ್ಯವಿರಲಿಲ್ಲ.
ಬಾಕ್ಸ್..
ಪಂಡರವಳ್ಳಿಯಿಂದ ಉತ್ತರ ಕನ್ನಡದ ದಾಂಡೇಲಿ ಬಳಿ ಜೋಯಿಡಾಕ್ಕೆ ತಂದಾಗಿ ಎದುರಾದ ತೀವ್ರ ವಿರೋಧದಿಂದ ಕಾಲ್ಕಿತ್ತ ಇಲಾಖೆ ಸಿಬ್ಬಂದಿ ಖಾನಾಪೂರ ಕಾಡಿನತ್ತ ಹೋಗಿದ್ದು ತಪ್ಪು ಹೆಜ್ಜೆ. ಈ ಒಂದು ತಪ್ಪು ನಿರ್ಧಾರದಿಂದ ಒಂದಿಷ್ಟು ಪ್ರಾಣಿಗಳು, ಓರ್ವ ಮಹಿಳೆ ಮೇಲಾಗಿ ವಿನಾಶದಂಚಿನಲ್ಲಿರುವ ಸಂತತಿಯ ಹುಲಿ ಬಲಿಯಾಯಿತು. ಇದರ ನೈತಿಕ ಹೊಣೆ ಹೊರುವವರು ಯಾರು? ಅಧ್ಯಯನ ಹೆಸರಲ್ಲಿ ವನ್ಯಜೀವಿ ಬಲಿಯಾಗಬೇಕಾ ? ಎಂಬ ಪ್ರಶ್ನೆ ಇಂದಿಗೂ ಇದೆ.
ಕೋಟ್
ಪಂಡರವಳ್ಳಿ ಹುಲಿಯ ಸ್ವಭಾವವನ್ನು ಒಮ್ಮೆ ಗಮನಿಸಿದರೆ ಅದು ಮನುಷ್ಯನ ರಕ್ತದ ರುಚಿ ಕಂಡಿದ್ದು ಸ್ಪಷ್ಟ. ಇಂತಹ ವೇಳೆ ಅದನ್ನು ಬೇರೆಡೆ ಬಿಡುವ ನಿರ್ಧಾರವೇ ತಪ್ಪು.ಕೆಲವರ ತಪ್ಪು ನಿರ್ಧಾರದಿಂದ ಅಮಾಯಕ ಗರ್ಭಿಣಿ ಸೇರಿದಂತೆ ಕೆಲ ದನಗಳು ಜೀವ ತೆತ್ತಬೇಕಾಯಿತು. ಪಂಡರವಳ್ಳಿಯಲ್ಲಿ ಮಹಿಳೆಯನ್ನು ತಿನ್ನುತ್ತಿದ್ದಂತೆ ಅದನ್ನು ಸೆರೆಯಾಳಾಗಿಸಲು ನಿರ್ಧರಿಸಿದಂತೆ ಮಾಡಿದ್ದರೆ ಈ ಅವಾಂತರ ಸೃಷ್ಟಿಯಾಗುತ್ತಿರಲಿಲ್ಲ.
-ಕೆ. ಉಲ್ಲಾಸ ಕಾರಂತ, ಖ್ಯಾತ ವನ್ಯಜೀವಿ ತಜ್ಞರು.





Post a Comment