ಶತಾಯುಷಿ ಶಿಕ್ಷಕನ ನಿಸ್ವಾರ್ಥ ಸೇವೆ......
ಶಿಕ್ಷಣ ಮಾನವನ ಮೂಲ ಹಕ್ಕುಗಳಲ್ಲೊಂದು. ವಿದ್ಯೆಯಿಲ್ಲದವನ ಬದುಕು ಹದ್ದಿಗಿಂತ ಕೇಡ ಎಂದು ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ. ಅದರ ಮಹತ್ವ ಅಷ್ಟಿದೆ. ಈ ಸತ್ಯವನ್ನರಿತ ನಮ್ಮ ಹಿಂದಿನ ಕಾಲದ ಅಂದರೆ ನಮ್ಮ ಹಿರಿಯ ಶಿಕ್ಷಕರು ತಮ್ಮ ವೃತ್ತಿಯನ್ನು ಸೇವಾ ಮನೋಭಾವದಿಂದ ನಿರ್ವಹಿಸುತ್ತಿದ್ದರು. ಸಂಬಳದ ದೃಷ್ಟಿಯಿಂದ ವೃತ್ತಿ ಮಾಡದೇ ಅದನ್ನೊಂದು ತಪಸ್ಸಿನಂತೆ ನಿರ್ವಹಿಸುತ್ತಿದ್ದರು. ಇದಕ್ಕೊಂದು ಉತ್ತಮ ಉದಾಹರಣೆ ಕೊಪ್ಪಳ ಜಿಲ್ಲೆಯ ಶಿವಪ್ಪ ಹಳ್ಳೂರ.100 ವರ್ಷ ದಾಟಿದ್ರೂ ಇವರ ಶಿಕ್ಷಣ ಸೇವೆ ಇಂದಿಗೂ ನಿತ್ಯ ನಿರಂತರ ಸಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ನಿವೃತ್ತಿ ಪಡೆದಿರುವ ವ್ಯಕ್ತಿ ಕೊಪ್ಪಳ ಜಿಲ್ಲೆಯಲ್ಲಿ ಅಷ್ಟೇ ಅಲ್ಲಾ, ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೂ ಫೇಮಸ್ ಆಗಿದ್ದಾರೆ. ತಮ್ಮ ನೆಚ್ಚಿನ ಇಂಗ್ಲೀಷ್ ಭಾಷೆಯನ್ನು ಶಾಲೆಯ ಮಕ್ಕಳಿಗೆ ಕಲಿಸುವ ಮೂಲಕ ಧನ್ಯತೆಯನ್ನು ಮೆರೆಯುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ವಾಸವಾಗಿದ್ದಾರೆ.1915 ರಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಬಾದವಾಡಗಿ ಗ್ರಾಮದಲ್ಲಿ ಇವರು ಜನಿಸಿದ್ದು, ಆಗಿನ ಕಾಲಕ್ಕೆ 7 ನೇ ತರಗತಿ ಅಂದ್ರೆ ಮುಲ್ಕಿ ಪರೀಕ್ಷೆಯನ್ನು ಪಾಸ್ ಆಗಿ 1934 ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ರು. ವಿಜಯಪೂರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಶಿಕ್ಷಕ ವೃತ್ತಿಯಲ್ಲಿ ಕಾರ್ಯ ನಿರ್ವಹಿಸಿ, 1972 ರಲ್ಲಿ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಿವೃತ್ತಿಯಾಗಿದ್ದಾರೆ. ತಮ್ಮ ಹಿರಿಯ ಮಗನೊಂದಿಗೆ ಕೊಪ್ಪಳ ಜಿಲ್ಲೆಗೆ ಆಗಮಿಸಿದ ಇವರು ಹೊಸಳ್ಳಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡುವ ಮೂಲಕ ತಮ್ಮಲಿರುವ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ.
ಪ್ರತಿ ದಿನ ಬೆಳಿಗ್ಗೆ 9.15 ಕ್ಕೆ ಶಾಲೆಗೆ ಹಾಜರಾಗುವ ಇವರು ನಜಕ್ಕೂ ಇತರೆ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ತಮ್ಮ ನಿವೃತ್ತಿ ವಯಸ್ಸಿನಲ್ಲಿ ಪಿಂಚಣಿ ಪಡೆದು ಆರಾಮವಾಗಿ ಇದ್ದುಕೊಂಡು ಜೀವನ ಮಾಡುವ ಶಿಕ್ಷಕರ ನಡುವೆ ಇವರದ್ದು ಮಾತ್ರ ವಿಭಿನ್ನ ರೀತಿಯ ಜೀವನ ಶೈಲಿ. ಎಂದಿಗೂ ಕೂಡ ಕನ್ನಡಕ ಧರಿಸದ ಇವರು ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ತಾವು ಮಾಡಿದ ಸೇವೆಗೆ ಇಲ್ಲಿಯವರೆಗೂ ಯಾವುದೇ ಸಂಭಾವನೆ ಪಡೆಯದೇ ಇರುವುದು ಇವರ ಗೌರವ ಮತ್ತಷ್ಟು ಹೆಚ್ಚಿಸಿದೆ.
ತಮಗೆ ಸಮಯಾವಕಾಶ ಸಿಕ್ಕರೆ ಗಣಿತದ ವಿಷಯವನ್ನು ಪಾಠ ಮಾಡುತ್ತಾರೆ. ಬಿಡುವಿನ ವೇಳೆಯಲ್ಲಿ ಮನೆಮುಂದಿನ ಹೊಲದಲ್ಲಿ ದನಗಳನ್ನು ಮೇಯಿಸಿಕೊಂಡು ಬರುತ್ತಾರೆ.
ಶಿವಪ್ಪ ಮಾಸ್ತರ್ಗೆ 10 ಜನ ಮಕ್ಕಳು ಹಾಗೂ 60 ಜನ ಮೊಮ್ಮಕ್ಕಳು. ಎಲ್ಲರೂ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಂದೆಯ ಆಸೆಯಂತೆ ಎಲ್ಲಾ ಮಕ್ಕಳು ತಮ್ಮಗೆ ಇಷ್ಟವಾದ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಮಾಸ್ತರ್ ಮಕ್ಕಳು ಇವರು ಎನ್ನುವ ಹಾಗೆ ಬದುಕಿ ತೋರಿಸುತ್ತಿದ್ದಾರೆ. ಎಲ್ಲರೂ ಹಬ್ಬ ಹರಿದಿನಗಳಲ್ಲಿ ಸೇರಿಕೊಂಡು ಹಬ್ಬ ಆಚರಣೆ ಮಾಡುತ್ತಾರೆ.
ಆದ್ರೆ ಇಂತಹ ಸಾಧನಾ ಜೀವಿ ಇಷ್ಟಲ್ಲಾ ಸಾಧನೆಯನ್ನು ಮಾಡಿದ್ದರೂ ಕೂಡ ಯಾರ ಮುಂದೆಯೂ ತಾವು ಮಾಡಿರುವ ಸಾಧನೆಯನ್ನು ಹೇಳಿಕೊಂಡಿಲ್ಲಾ. ಇವರು ನಿಜವಾಗಲೂ ಇಂದಿನ ಯುವ ಪೀಳಿಗೆಯ ಶಿಕ್ಷಕರಿಗೆ ಮಾದರಿ ಶಿಕ್ಷಕನಾಗಿದ್ದಾರೆ. ರಾಜಕೀಯ ಮಾಡಿಕೊಂಡು ತಿರುಗಾಡುವ ಅದೇಷ್ಟೋ ಮಂದಿ ಶಿಕ್ಷಕರು ಇವರಿಂದ ಕಲಿಯುವುದು ಸಾಕಷ್ಟಿದೆ.





Post a Comment