ಅವಕಾಶಗಳ ನಿರೀಕ್ಷೆಯಲ್ಲಿ ಸುಭಾಶ

 ಅವಕಾಶಗಳ ನಿರೀಕ್ಷೆಯಲ್ಲಿ ಸುಭಾಶ

ನಮ್ಮವರೇ ನಮಗೆ ಅವಕಾಶ ಕೊಡುವುದಿಲ್ಲ. ಇನ್ನು ಬೇರೆಯವರು ಕೊಟ್ಟಾರೆಯೇ ?
ಹೀಗೆಂದು ವಿಷಾದ ಹಾಗೂ ಹತಾಶೆಯ ಮಾತುಗಳನ್ನಾಡಿದ್ದು  ಸುಭಾಶ ಕಡಕೋಳ. 
ಹೌದು ಬಹಳಷ್ಟು ಜನರಿಗೆ ಈ ಸುಭಾಶ ಕಡಕೋಳ ಅಂದರೆ ಗೊತ್ತಾಗಲಿಕ್ಕಿಲ್ಲ. ಅದುವೇ ಇವರಿಗೆ ಎದುರಾಗಿರುವ ಸಮಸ್ಯೆ. ಚಿತ್ರರಂಗದಲ್ಲಿ ಸಾಕಷ್ಟು ಅನುಭವ,ಪ್ರತಿಭೆ ಹೊಂದಿದ್ದರೂ  ದೊರೆತ ಅವಕಾಶ, ಸಿಕ್ಕ ಮನ್ನಣೆ ಮಾತ್ರ ಶೂನ್ಯ ಎಂತಲೇ ಹೇಳಬಹುದು.
ಬೆಂಗಳೂರು, ಮೈಸೂರಿಗೆ ಸೀಮಿತವಾಗಿದ್ದ ಚಲನಚಿತ್ರೋದ್ಯಮ ಇಂದು ಗಂಡು ಮೆಟ್ಟಿನ ನೆಲ ಉತ್ತರ ಕರ್ನಾಟಕಕ್ಕೆ ಲಗ್ಗೆ ಇಟ್ಟಿದೆ. ಈ ಭಾಗದ ಹತ್ತಾರು ಪ್ರತಿಭೆಗಳು ಸ್ಯಾಂಡಲ್‍ವುಡ್‍ನಲ್ಲಿ ಮಿಂಚುತ್ತಿವೆ. ಆದರೆ, ಚಲನಚಿತ್ರ ರಂಗ ದಕ್ಷಿಣ ಕರ್ನಾಟಕದ ಕಲಾವಿದರಿಗೆ ನೀಡಿದಷ್ಟು ಮಾನ್ಯತೆಯನ್ನು ಉತ್ತರ ಕರ್ನಾಟಕದ ಕಲಾವಿದರಿಗೆ ನೀಡುತ್ತಿಲ್ಲ. ಪರಿಣಾಮ ಇಲ್ಲಿನ ಕಲಾವಿದರು ಅಸಾಧಾರಣ ಪ್ರತಿಭೆ ಹೊಂದಿದ್ದರೂ, ಬಣ್ಣದ ಲೋಕದಲ್ಲಿ ನೆಲೆ ಕಂಡುಕೊಳ್ಳುತ್ತಿಲ್ಲ. ಕಿತ್ತೂರು ಚನ್ನಮ್ಮನ ನಾಡು, ಸಂಗೊಳ್ಳಿ ರಾಯಣ್ಣನ ಬೀಡು ಎಂದೇ ಖ್ಯಾತಿ ಗಳಿಸಿದ ಬೈಲಹೊಂಗಲದ ಕಲಾ ನಿರ್ದೇಶಕ ಸುಭಾಶ ಕಡಕೋಳ ಇದಕ್ಕೆ ಉತ್ತಮ ನಿದರ್ಶನ.
   ಉತ್ತರ ಕರ್ನಾಟಕದಲ್ಲಿ ಸುಭಾಶ ಕಡಕೋಳ ಎಂದರೆ, ಇವನಾರವ... ಇವನಾರವ... ಎನ್ನುವವರಿಗಿಂತ ಇವ... ನಮ್ಮವ... ಇವ ನಮ್ಮವ... ಎನ್ನುವವರೇ ಹೆಚ್ಚು. ಇವರ ಕಲಾ ಸೇವೆಗೆ ಇದೀಗ 29ರ ಹರೆಯ. ಬಾಲ್ಯದಿಂದಲೇ ಬಣ್ಣದ ಲೋಕದ ಒಡನಾಟ ಬೆಳೆಸಿಕೊಂಡ ಕಡಕೋಳ ಅವರು 100ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದಾರೆ. ಸಿನಿ ಜಗತ್ತಿನ ದಿಗ್ಗಜ ನಿದೇಶಕರೊಂದಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಈವರೆಗೆ ಇವರಿಗೆ ಚಿತ್ರರಂಗದಲ್ಲಿ ಶಾಶ್ವತ ನೆಲೆ ಸಿಕ್ಕಿಲ್ಲ. ರಾಜ್ಯ ಸರ್ಕಾರವು ಇವರನ್ನು ಗುರುತಿಸುವ ಗೋಜಿಗೆ ಹೋಗಿಲ್ಲ.! ಹೀಗಾಗಿ ಕಡಕೋಳ ಮನದಾಳದಲ್ಲೇ ನೋವನ್ನು ನುಂಗಿಕೊಂಡು ಬದುಕಿನ ಬಂಡಿ ದೂಡಿಕೊಂಡು ಮುಂದೆ ಸಾಗುತ್ತಿದ್ದಾರೆ.
ಅನುಭವ:
ಕಡಕೋಳ ಅವರು ಮೊಗ್ಗಿನ ಮನಸ್ಸು, ಸಂಗ್ಯಾ ಬಾಳ್ಯಾ, ಪುಟ್ನಂಜ, ಯಶವಂತ, ಶುಕ್ಲಾಂ ಭರದರಂ, ಈಶ, ಆಡು ಆಟ ಆಡು, ಜೈ ಹಿಂದ್, ವಂದೇ ಮಾತರಂ, ನಮ್ಮೂರ ಮಂದಾರ ಹೂವೇ, ಓ ಪ್ರೇಮವೇ, ಬಂದಿ, ಜೀವನಸಂಗ್ರಾಮ, ಅರುಣರಾಗ, ಒಲವಿನ ಆಸರೆ, ಮತ್ಸರ, ಹೊಸರಾಗ, ಹುಡ್ಗೀರು ಸಾರ್ ಹುಡ್ಗೀರು, ಗಣೇಶನ ಮದುವೆ, ಅಧಿಕಾರ ಸೇರಿದಂತೆ ವಿವಿಧ ಚಲನಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 
ಮಾರುತಿ ಶಿವರಾಂ, ಕೆ.ವಿ.ಜಯರಾಂ, ಎಸ್.ನಾರಾಯಣ, ನಾಗಣ್ಣ, ವಿ.ರವಿಚಂದ್ರನ್, ಫಣಿ ರಾಮಚಂದ್ರ, ಶಿವಮಣಿ, ಸುಂದರಕೃಷ್ಣ ಅರಸ್, ಎಸ್.ವಿ.ರಾಜೇಂದ್ರಸಿಂಗ್ ಬಾಬು, ಶಶಾಂಕ, ರಾಮನಾಥ ಋಗ್ವೇದಿ, ರೆಹಮಾನ್, ನಂಜುಂಡೇಗೌಡ ಅವರೊಂದಿಗೆ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇದೀಗ ಬೆಂಗಳೂರಿನಲ್ಲೇ ನೆಲೆಸಿದ್ದು, ಚಲನಚಿತ್ರ ರಂಗದ ಒಡನಾಟದಲ್ಲೇ ದಿನಗಳೆಯುತ್ತಿದ್ದಾರೆ.
ಗುರುತಿಸದ ಸರ್ಕಾರ
ಉತ್ತರ ಕರ್ನಾಟಕದಲ್ಲಿ ನಡೆಯುವ ಕಿತ್ತೂರ ರಾಣಿ ಚನ್ನಮ್ಮನ ಉತ್ಸವ, ಬೆಳವಡಿ ಮಲ್ಲಮ್ಮನ ಉತ್ಸವ, ಸಾಹಿತ್ಯ ಸಮ್ಮೇಳನಗಳು ಸೇರಿದಂತೆ ವಿವಿಧ ಸಾಹಿತ್ಯಿಕ, ಸಾಂಸ್ಕøತಿಕ ಮತ್ತು ಕಲಾತ್ಮಕ ಚಟುವಟಿಕೆಗಳಲ್ಲಿ ಪರ ರಾಜ್ಯಗಳ ಕಲಾವಿದರನ್ನು ಆಹ್ವಾನಿಸಿ, ಕಾರ್ಯಕ್ರಮ ಕೊಡಿಸುವ ಸರ್ಕಾರ ರಾಷ್ಟ್ರಮಟ್ಟದ ಕಲಾವಿದರಿಗೆ ಮನ್ನಣೆ ನೀಡುತ್ತಿದೆ. ಈ ಮೂಲಕ ಸ್ಥಳೀಯ ಕಲಾವಿದರ ಬಗ್ಗೆ ನಿರ್ಲಕ್ಷ್ಯ ಮನೋಭಾವ ತಾಳುತ್ತಿದೆ. ಪರಿಸ್ಥಿತಿ ಹೀಗಿರುವಾಗ ಉತ್ತರ ಕರ್ನಾಟಕದ ಕಲಾವಿದರು ಬೆಳಕಿಗೆ ಬರಲು ಹೇಗೆ ಸಾಧ್ಯ?. ಹೀಗಾಗಿ ಸರ್ಕಾರು ಉತ್ತರ ಕರ್ನಾಟಕದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲಿ ಸೌಜನ್ಕಕ್ಕಾದರೂ ಅಲ್ಲಿನ ಕಲಾವಿದರನ್ನು ಗುರುತಿಸಿ, ಗೌರವಿಸಲು ಮುಂದಾಗಬೇಕು ಎನ್ನುತ್ತಾರೆ ಸುಭಾಶ ಕಡಕೋಳ.
ಉತ್ತರ ಕರ್ನಾಟಕದವರನ್ನೇ ಆಯ್ಕೆ ಮಾಡಿ 


ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ನಿರ್ಮಾಪಕರು ಚಲನಚಿತ್ರ ನಿರ್ಮಿಸಲು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಇದರ ಸದ್ಬಳಕೆಯಾಗಬೇಕಾದರೆ ಈ ಭಾಗದ ಕಲಾವಿದರಿಗೆ ಚಲನಚಿತ್ರಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗಬೇಕು. ನಿರ್ಮಾಪಕರು ಈ ಭಾಗದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಉತ್ತರ ಕರ್ನಾಟಕ ಭಾಗವೂ ಚಲನಚಿತ್ರ ರಂಗದಲ್ಲಿ ಮುಂಚೂಣಿಗೆ ಬರಲು ಸಾಧ್ಯ ನಿಜ. ಆದರೆ ಇದಾಗುತ್ತಿಲ್ಲ ಎನ್ನುವುದು ಕಡಕೋಳ ಸೇರಿದಂತೆ ಹಲವು ಜನರ ಅಭಿಪ್ರಾಯ.  
ಫೇಲಾದರೆ ಹೆದರಬೇಡಿ:
ಬಹುತೇಕ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಫೇಲಾದರೆ ಖಿನ್ನತೆಗೆ ಒಳಗಾಗುವದು, ಶಿಕ್ಷಣಕ್ಕೆ ವಿದಾಯ ಹೇಳುವದು ಸಾಮಾನ್ಯ. ಆದರೆ, ಸುಭಾಶ ಕಡಕೋಳ ಪಿಯುಸಿ ಪರೀಕ್ಷೆಯಲ್ಲಿ ಫೇಲಾದರೂ ಎದೆಗುಂದಲಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿದ ಕಡಕೋಳ, ಡಿಪ್ಲೊಮಾ ಇನ್ ಫೈನ್ ಆಟ್ರ್ಸ್ ಪದವಿ ಪಡೆದು ಕಲಾ ಪ್ರವೃತ್ತಿ ಮೈಗೂಡಿಸಿಕೊಳ್ಳುವ ಸಿನಿ ರಂಗದಲ್ಲಿ ಮಿಂಚುತ್ತಿದ್ದಾರೆ.
ಸಿನಿ ರಂಗದಲ್ಲಿ ಸದ್ದಿಲ್ಲದೇ ಸೇವೆಯಲ್ಲಿ ತೊಡಗಿರುವ ಸುಭಾಶ ಕಡಕೋಳ ಗುರುತಿಸಿ, ಗೌರವಿಸುವ ಕೆಲಸಕ್ಕೆ ಸರ್ಕಾರ ಮುಂದಾಗಲಿ. ಉತ್ತರ ಕರ್ನಾಟಕ ಭಾಗದ ನಿರ್ಮಾಪಕರು ಇಂತಹ ಕಲಾವಿದರಿಗೆ ತಮ್ಮ ಚಲನಚಿತ್ರಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಿ. 

Post a Comment

Distributed by Presul Info Tech

Distributed by Gooyaabi Templates | Designed by Presul Info Tech