ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನವಲಿಹಾಳ್ ಎಂಬ ಊರಿದೆ. ಹೊಲ,ಗುಡ್ಡಗಳಲ್ಲಿ ಕುರಿ ಮೇಯಿಸುವ ಕುಟುಂಬಗಳು ಇಲ್ಲಿ ನೆಲೆಸಿವೆ. ಕುರಿಗಳನ್ನು ಹೊಡೆದು ಸಾಗುವ ಅಲೆಮಾರಿಗಳು ಇಲ್ಲಿನವರು. ಊರಲ್ಲಿ ಯಾವತ್ತೂ ಬೇರು ಬಿಡದ ಇವರಿಗೆ ವಿದ್ಯೆ,ಕೃಷಿ ಅವಕಾಶಗಳು ಕಡಿಮೆ. ಬಯಲು ಬದುಕು ಮಳೆ ಗಾಳಿಗೆ ತೆರೆದಿರುತ್ತದೆ, ಕಷ್ಟದ ಕಾಲ್ನಡಿಗೆಗೆ ಒಗ್ಗಿದೆ. ಆಗಷ್ಟೇ ಜನಿಸಿದ ಕುರಿ ಮರಿಗಳಿಗೆ ಮಂದೆಯ ಜೊತೆ ಮುಂದೆ ಸಾಗಲಾಗುವದಿಲ್ಲ. ಅವನ್ನು ಹೆಗಲಿಗೆ ನೇತು ಬಿದ್ದ ತಮ್ಮ ಪರಾಳದಲ್ಲಿ ಹೊತ್ತು ಸಾಗುವದು ಕುರುಬರ ಕ್ರಮ.
ಸಣಬಿನ ಈ ಚೀಲದಲ್ಲಿ ಕುರಿಮರಿಯ ಜೊತೆ ಬುತ್ತಿಯ ಗಂಟಿರುತ್ತದೆ. ಪರಾಳದ ಜೊತೆ ಅಕ್ಷರ ತಿದ್ದುವ ಒಂದು ಪಾಟಿ ಸೇರಿದರೆ ಏನಾಗಬಹುದು? ಇಂದು ನಾಡಿನ ಕೃಷಿ ಸಾಧಕರಾದ ಹಾನಗಲ್ಲಿನ ಮಂತಗಿಯ ಮುತ್ತಣ್ಣ ಪೂಜಾರ್ ಬದುಕಿನ ಒಂದು ಸೋಜಿಗದ ಕಥೆ ಇಲ್ಲಿಂದ ಶುರುವಾಗುತ್ತದೆ.
ಮುತ್ತಣ್ಣ ಪೂಜಾರ್ ಕುರಿ ಕಾಯುತ್ತಿದ್ದ ಪೋರ, ಎಂಟು ವರ್ಷದಿಂದ ಕಾಯಕ ಆರಂಭಿಸಿ ಇಪ್ಪತ್ತು ವರ್ಷದವರೆಗೂ ಕುರಿ ಹಿಂಡಿನ ಜೊತೆ ಸಂಚರಿಸಿದವರು. ಹನ್ನೆರಡು ವರ್ಷಕ್ಕೆ ಮದುವೆಯಾದ ಬಾಲ ಸಂಸಾರಿ! ಅವರಿವರ ಹೊಲದಲ್ಲಿ ಕುರಿ ಮೇಯಿಸುತ್ತ ಚೌಕಟ್ಟಿಲ್ಲದ ಚಿತ್ರದಂತೆ ಜೀವಯಾನ ಸಾಗಿಸಿದವರು.
1997ನೇ ವರ್ಷ, ರೋಗದಿಂದ ಒಮ್ಮೆಗೆ 350-400ಕುರಿಗಳು ಸಾವನ್ನಪ್ಪಿದವು. ಅವುಗಳನ್ನು ಹಳ್ಳ,ಗುಂಡಿಗಳಲ್ಲಿ ಹಾಕಿದರು. ಆ ದುರ್ನಾತ ಅನುಭವಿಸಿದ ಹಳ್ಳಿಗರು ಗಲಾಟೆ ಆರಂಭಿಸಿದರು. ಕುರಿ ಸಾವಿನ ಅನಿರೀಕ್ಷಿತ ಆಘಾತದಿಂದ ಮುತ್ತಣ್ಣನಿಗೆ ಈ ಕಾಯಕ ಸಾಕೆನಿಸಿತು. ಶಾಲೆಗೆ ಹೋಗ ಬೇಕು, ಅಕ್ಷರ ಕಲಿಯಬೇಕು ಮುತ್ತಣ್ಣನಲ್ಲಿ ಮಹದಾಸೆ ಹುಟ್ಟಿತು. ಕುರಿಗಳಿಗೆ ಮೇವು ಹುಡುಕಿ ಅಡ್ಡಾಡುವ ಹುಡುಗನ ದಿನಚರಿಗೆ ಶಾಲೆ ಯಾವಾಗಲೂ ಕೈಗೆಟುಕದ ಕನಸು. ಅಳುತ್ತ ಅಪ್ಪ ಬೀರಪ್ಪನ ಜೊತೆ ನಿರಂತರ ಜಗಳ. ಮಗನ ಅಕ್ಷರದ ಆಸೆ ಇಡೇರಿಸಲಾಗದ ಬೀರಪ್ಪ ಒಮ್ಮೆ ಅಂಕಲಿಪಿ,ಪಾಟಿ ತಂದು ಕೊಟ್ಟರು. ಆದರೆ ಅ,ಆ ಅರಿತವರು ಕುರಿ ಮೇಯಿಸುವವರಲ್ಲಿ ಯಾರೂ ಇರಲಿಲ್ಲ. ಅಂಕಲಿಪಿ ಹಿಡಿದ ಮತ್ತಣ್ಣ ಹೊಲದ ದಾರಿಯಲ್ಲಿ ಅಡ್ಡಾಡುವವರಲ್ಲಿ ಅಕ್ಷರ ಓದಿಸಿಕೊಂಡರು. ಶಾಲೆ ಬಿಡುವ ಸಮಯಕ್ಕೆ ಮಕ್ಕಳೆದುರು ಕುರಿ ನಿಲ್ಲಿಸಿ ಪಾಠ ಕೇಳಿದರು. ಹಗಲಿನಲ್ಲಿ ಅಡ್ಡಾಡುತ್ತ ರಾತ್ರಿ ಒಂದೆಡೆ ಕುರಿ ನಿಲ್ಲಿಸುವದು ಪದ್ದತಿ. ಕಳ್ಳರು,ಚಿರತೆ,ತೋಳಗಳಿಂದ ರಕ್ಷಣೆಗೆ ರಾತ್ರಿಯಿಡೀ ನಿದ್ದೆಗೆಟ್ಟು ಮತ್ತೆ ಕಾವಲು. ಮೂರು ಸಂಜೆ ಪಾರಿ( ಸಂಜೆ ಆರರಿಂದ ರಾತ್ರಿ ಹನ್ನೇರಡು ಗಂಟೆ) ಸಮಯದಲ್ಲಿ ಕುರಿಗಳ ನಿಗಾವಹಿಸುತ್ತ ಗುಬ್ಬಿ ಲಾಂದ್ರದ ಬೆಳಕಿನಲ್ಲಿ ಅಕ್ಷರ ತಿದ್ದಿದರು. ಓದು ಕಲಿತರು.
ಮುಳ್ಳುಕಂಟಿಯ ನಡುವೆ ನಡೆಯುತ್ತ ಒಂದೊಂದಾಗಿ ಅಕ್ಷರ ಹೆಕ್ಕುತ್ತ ಹೊರಟರು, ಭದ್ರಾವತಿ ಬಂಡಿಗುಡ್ಡದಲ್ಲಿ ಅರಣ್ಯ ಇಲಾಖೆ ಬರೆದ ಒಂದು ಫಲಕ ಗಮನಿಸಿ ಓದಿದರು. ಮೊದಲು ಓದಿದ ಸಾಲು ` ಕಾಡು ಎಂದರೆ ನೀರು,ನೀರು ಎಂದರೆ ಅನ್ನ, ಅನ್ನ ಎಂದರೆ ಪ್ರಾಣ ' ಅದು ಮುತ್ತಣ್ಣನ ಮನಸ್ಸು ಆವರಿಸಿತು. ಓದುವ ಹಸಿವು ಮತ್ತೆ ಬೆಳೆಯಿತು, ದಾರಿಯಲ್ಲಿ ಬಿದ್ದ ಕಾಗದ ತುಣುಕು ಕೈಗೆತ್ತಿಕೊಂಡು ಓದುತ್ತ ಪಳಗಿದರು. ಕುರಿ ಮೇಯಿಸುತ್ತ ತೋಟ,ಹೊಲ ನೋಡುವಾಗ ಕೃಷಿಯ ಸೆಳೆತ ಹೆಚ್ಚಿತು. ಅಲೆಮಾರಿ ಬದುಕಿನಲ್ಲಿ ನೆಮ್ಮದಿಯಿಲ್ಲ, ಮುಂದಿನ ತಲೆಮಾರಿಗೂ ಶಿಕ್ಷಣ ದೊರೆಯುವದಿಲ್ಲವೆಂದು ಮನದಟ್ಟಾಯ್ತು. ಕೆಲವು ವರ್ಷಗಳ ಹಿಂದೆ ಇವರ ಮಾವ ಸಿದ್ದಪ್ಪ ಕುರಿ ಮಾರಾಟಮಾಡಿ ಹಾನಗಲ್‍ನಲ್ಲಿ ಒಂದು ಜಮೀನು ಖರೀದಿಸಿದ್ದರು, ಅವರ ಮಕ್ಕಳು ಶಾಲೆ ಸೇರಿದ್ದರು. ಇದು ಮುತ್ತಣ್ಣನಿಗೆ ಪ್ರೇರಣೆ ನೀಡಿತು. ಒಂದೆಡೆ ನಿಂತು ಕೃಷಿ ನಡೆಸಿದರೆ ಸಿಗುವ ಖುಷಿ ದೊಡ್ಡದು. ಆಗ ಮಕ್ಕಳನ್ನು ಶಾಲೆಗೆ ಕಳಿಸಿಲು ಸಾಧ್ಯವಿದೆ. ಹಾನಗಲ್ ಮಂತಗಿಯಲ್ಲಿ ಕ್ರಿ,ಶ1999ರಲ್ಲಿ ಭೂಮಿ ಪಡೆದರು. ಅಲ್ಲಿಂದ ಅಲೆಮಾರಿ ಮುತ್ತಣ್ಣನ ಕುಟುಂಬ ಮಂತಗಿಯಲ್ಲಿ ಕೃಷಿ ಬದುಕಿನಲ್ಲಿ ನೆಲೆಯಾಯಿತು.
ಮರ ಗಿಡ ಬೆಳೆಸಬೇಕು,ತೋಟ ಮಾಡಬೇಕೆಂಬ ಆಸೆ ಯಾವತ್ತೂ ಕಾಡುತ್ತಿತ್ತು. ಕುರಿ ಕಾಯುತ್ತ ತರಿಕೆರೆಯ ತೋಟದ ಚಿತ್ರಗಳನ್ನು ಪಾಟಿಯಲ್ಲಿ ಬಿಡಿಸುತ್ತಿದ್ದವರು ಇವರು! ಈಗ ತಮ್ಮದೇ ಹೊಲದಲ್ಲಿ ಚಿತ್ರ ಬಿಡಿಸಲು ಆರಂಭಿಸಿದರು. ಹಾನಗಲ್‍ನಲ್ಲಿ ಭೂಮಿ ಖರೀದಿಸಿದ ಆರಂಭದಲ್ಲಿ ಅವರಿವರ ಕೃಷಿ ಮಾತು ಕೇಳಿ ಸೋಲು ಕಂಡರು. ಕುರಿ ಮೇಯಿಸುವವರಿಗೆ ಕೃಷಿ ಕೈ ಹಿಡಿಯುವದಿಲ್ಲವೆಂದು ಕೆಲವರು ನಕ್ಕರು. ಮುತ್ತಣ್ಣನ ಕಠಿಣ ಪರಿಶ್ರಮ ಬಲ, ಸದಾ ಗೆಲ್ಲುವ ಹಂಬಲ. ಕೃಷಿ ಕಲಿಕೆಯ ಉತ್ಸಾಹ ಇಮ್ಮಡಿಸಿತು.
31 ಎಕರೆ ಒಡೆಯ ಕೃಷಿಯಲ್ಲಿ ಸೋಲುತ್ತ ಗೆಲ್ಲುತ್ತ ಇಂದು ಮುತ್ತಣ್ಣ 31 ಎಕರೆ ಒಡೆಯ. ಚಿಕ್ಕು,ಅಡಿಕೆ,ತೆಂಗು,ಬಾಳೆ,ಮಾವಿನ ಮರಗಳು ಇಲ್ಲಿ ನಳನಳಿಸುತ್ತಿದೆ. ಶ್ರೀ ಪದ್ಧತಿಯಲ್ಲಿ ಭತ್ತದ ಬೇಸಾಯವಿದೆ, ಎಕರೆಗೆ 45ಕ್ವಿಂಟಾಲ್ ಇಳುವರಿಯಿದೆ! ಬದುವಿನಲ್ಲಿ ಮರಗಳ ಸಾಲು ನೋಡಬಹುದು. ಜೋಳ,ಅಲಸಂದೆ,ಉದ್ದು,ಶೇಂಗಾ,ಸೂರ್ಯಕಾಂತಿ,ಮೆಣಸು,ತರಕಾರಿ ಬೆಳೆ ವೈವಿಧ್ಯದ ಬೆರಗು ಇಲ್ಲಿದೆ. ಮಳೆ ನೀರು ಶೇಖರಣೆಗೆ ವಿಶಾಲ ಕೆರೆ ನಿರ್ಮಿಸಿದ್ದಾರೆ. ಅಲ್ಲಿ ಮೀನು ಸಾಕಣೆ ನಡೆದಿದೆ. ಎರೆಗೊಬ್ಬರ,ಜೇನು ಸಾಕಣೆ,ಹೈನುಗಾರಿಕೆ,ನಾಟಿ ಕೋಳಿ ಸಾಕಣೆ ಕೃಷಿ ಪೂರಕ ಕಸುಬುಗಳಿವೆ. ಅಡಿಕೆ ಸಸಿಗಳ ನರ್ಸರಿ, ಮಾವು-ಚಿಕ್ಕು ಕಸಿಗಿಡಗಳ ತಯಾರಿಯಲ್ಲೂ ಪರಿಣತರು.ಸರಕಾರದ ತೋಟಗಾರಿಕಾ ಇಲಾಖೆಯ ನೆರವಿನಿಂದ ಗ್ರೀನ್ ಹೌಸ್ ನಿರ್ಮಿಸಿ ಗುಣ್ಣಮಟ್ಟದ ಸಸ್ಯ ಬೆಳೆಸುವ ಕಲೆ ಕರಗತವಾಗಿದೆ. ಗೋಮೂತ್ರ ಬಳಸಿ ಜೈವಿಕ ಗೊಬ್ಬರ ತಯಾರಿಸುತ್ತಾರೆ.ದನಕರು ಮೇವಿಗೆ ವಿವಿಧ ಹುಲ್ಲಿನ ತಳಿಗಳ ಸಂಗ್ರಹವಿದೆ.ಹೈನುಗಾರಿಕೆಯ ಸ್ವಾವಲಂಭನೆಗೆ ಸೂತ್ರಗಳಿವೆ. ಈಗಲೂ ಇವರಲ್ಲಿ 1500ಕುರಿಗಳಿವೆ. ಅಲೆಮಾರಿ ಹುಡುಗ ಮಣ್ಣಿಗೆ ಮರಳಿ ಕೃಷಿ ಕಟ್ಟಿದ ರೀತಿ ಅಚ್ಚರಿ ಹುಟ್ಟಿಸುತ್ತಿದೆ. ಮುತ್ತಣ್ಣನ ಕೃಷಿ ಮಾದರಿ ವೀಕ್ಷಣೆಗೆ ಪ್ರತಿ ವರ್ಷ ಇಂದು ಸಾವಿರಾರು ರೈತರು ಭೇಟಿ ನೀಡುತ್ತಿದ್ದಾರೆ. ಕೃಷಿ ಅನುಭವಗಳನ್ನು ಮುತ್ತಣ್ಣ ಎಲ್ಲರಿಗೆ ಹಂಚುತ್ತಾರೆ. ಬದುಕು ಬದಲಿಸಬಹುದು ಎನ್ನುವದಕ್ಕೆ ಇವರ ಕೃಷಿ ಗಾಥೆ ಹಲವರಿಗೆ ಪ್ರೇರಣೆ ನೀಡುತ್ತಿದೆ. ಮುತ್ತಣ್ಣನ ಹೊಲ,ತೋಟದ ಬದುವಿನಲ್ಲಿ 2500ಕ್ಕೂ ಹೆಚ್ಚು ತೇಗದ ಸಸಿಗಳು ಇಂದು ಮರವಾಗುತ್ತಿವೆ. ಒಂದು ಸಾವಿರಕ್ಕೂ ಹೆಚ್ಚು ಮಾವಿನ ಮರಗಳು ಫಲ ನೀಡುತ್ತಿವೆ.
ನಾನು ಹೆಬ್ಬೆಟ್ರೀ....ಶಾಲೀಗೆ ಹೋಗಲಿಲ್ಲ ತೋಟಕ್ಕೆ ಹೋದಾಗ ಮುತ್ತಣ್ಣ ನೊಂದು ಹೇಳುತ್ತಿದ್ದ ದಿನಗಳಿವೆ. ಪರಾಳದಲ್ಲಿ ಪಾಟಿ, ಒಂದು ಗುಬ್ಬಿ ಲಾಂದ್ರ ಹಿಡಿದ ಬಳಿಕ ಹುಡುಗ ಕೃಷಿ ಕಲಿಕೆಯ ಹಸಿವಿನಲ್ಲಿ ಬೆಳೆದು ನಿಂತಿದ್ದಾರೆ. ಕೃಷಿ ಹಸಿರು ಮುತ್ತಿನ ಗ್ರಂಥ ಮಣ್ಣಿನಲ್ಲಿ ಬರೆದಿದ್ದಾರೆ. ತಂದೆ ಬೀರಪ್ಪ,ತಾಯಿ ಶಾರದಮ್ಮ,ಪತ್ನಿ ಗೌರಮ್ಮನ ಅವಿಭಕ್ತ ಕುಟುಂಬ ಇವರದು. ಮುತ್ತಣ್ಣನ ಮಕ್ಕಳಾದ ರೋಜಾ,ನವೀನ,ಸಂಗೀತಾ ವಿದ್ಯಾಭ್ಯಾಸ ನಡೆಸಿದ್ದಾರೆ. ಮನೆಯ ಸುತ್ತ ಹೂದೋಟ ಬೆಳೆಸುತ್ತ,ತರಕಾರಿ ಬೆಳೆಸುತ್ತ ಮುತ್ತಣ್ಣ ಕೃಷಿ ನೆಮ್ಮದಿಯ ಸಾಧ್ಯತೆ ಹೇಳುತ್ತಾರೆ.
ಕೃಷಿಯ ಬೆರಗು ಕಟ್ಟಿ ನಿಲ್ಲಿಸಿದ ಇವರಲ್ಲಿ ನಾಡಿಗೆ ಪಾಠ ಹೇಳುವ ತಾಕತ್ತಿದೆ, ಕೃಷಿ ನಿರಾಸೆಗಳನ್ನು ಜಾಡಿಸಿ ನಮ್ಮಲ್ಲಿ ಹೊಸ ಉತ್ಸಾಹ ತುಂಬುವ ಕಳಕಳಿಯಿದೆ. ಓದಿದ ಯುವಕರು ಕೃಷಿ ಮರೆಯುತ್ತಿರುವ ದಿನವಿದು. ಹಳ್ಳಿಗಳನ್ನು ಮರೆಯುತ್ತ, ಕೃಷಿ ಭೂಮಿಯನ್ನು ಮಾರಾಟ ಮಾಡುತ್ತ ನಗರಕ್ಕೆ ಓಡುವ ಯುವ ಸಮುದಾಯಕ್ಕೆ ಕೃಷಿ ದಾರಿಗೆ ಮರಳಲು ಮುತ್ತಣ್ಣನ ಜೀವನಗಾಥೆ ಮಣ್ಣಿಗೆ ಮರಳಲು ಎಲ್ಲರಿಗೂ ಸ್ಫೂರ್ತಿಯಾಗಿದೆ.





Post a Comment