ಪಂಚಮವೇದಾ ಪ್ರೇಮದನಾದಾ ಪ್ರಣಯದ ಸರಿಗಮ ಭಾವಾನಂದಾ ಈ ಹಾಡು ಕೇಳಿದೊಡನೆ ಎಂಥಾ ವೈರಾಗ್ಯಮೂರ್ತಿಗೂ ಒಂದಿಷ್ಟು ಚೈತನ್ಯ ಬರದಿರದು. ಹೌದು ಬರೀ ಹಾಡಲ್ಲ ಈ ಹಾಡಿನ ಹಿಂದಿರುವ ಅಮರ ಪ್ರೇಮದ ಗುಣಗಾನಕ್ಕೆ ಸೆಳೆಯುವ ಚುಂಬಕ ಶಕ್ತಿ ಇದೆ. ಪ್ರೀತಿ, ಪ್ರೇಮ, ಪ್ರಣಯವೆಂದರೆನೇ ಹಾಗೆ. ಅದು ಯಾವಾಗ ಯಾರಲ್ಲಿ ಅಂಕುರವಾಗುತ್ತೋ ಇಂದಿಗೂ ನಿಗೂಢ. ಪ್ರೀತಿ ಅದುಮಿಡಲಾಗದ ಭಾವನೆಗಳ ಮಹೂರ್ತ ರೂಪ. ಪ್ರೀತಿಯಿಂದ ಗೆಲ್ಲಲಾಗದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಅನ್ನುವ ಮಾತಿದೆ. ಅದು ನಿಜವೂ ಹೌದು. ಈ ಪ್ರೀತಿಗೆ ನೂರೆಂಟು ಅರ್ಥಗಳಿವೆ. ವಿಶಾಲವಾದ ವ್ಯಾಪ್ತಿ ಇದೆ. ಇಂದಿನ ಯುವಪಿಳಿಗೆ ಬೆನ್ನತ್ತಿ ಹೊರಟಿರುವ ಪ್ರೀತಿನೇ ಬೇರೆ ಹಿಂದಿನ ಅಮರ ಪ್ರೇಮವೇ ಬೇರೆ. ಇವೆರೆಡಕ್ಕೂ ಅಜಗಜಾಂತರ. ಇಂದಿನದೇನಿದ್ದರೂ ಫಾಸ್ಟ್ ಯುಗ. ಎಲ್ಲವೂ ಅಂದುಕೊಂಡ ಹಾಗೆ ಕೂಡಲೇ ಆಗಬೇಕು. ಹುಡುಗ ಇಷ್ಟ ಪಟ್ಟ ಅಂದಾಕ್ಷಣ ಹುಡುಗಿಯೂ ಓಕೆ ಮಾಡಬೇಕು. ಬೈಕ್ ಮೇಲೆ ಸುತ್ತೋಕೆ ರೆಡಿಯಾಗಬೇಕು. ಪಾರ್ಕ್, ಪಬ್ಬು, ಮಾಲ್‍ಗಳಲ್ಲಿ ಶಾಪಿಂಗ್ ಇವು ಇಂದಿನ ಪ್ರಣಯ ಪಕ್ಷಿಗಳು ಓಡಾಡುವ ಸ್ಥಳಗಳು. ಪ್ರೀತ್ಸೋದು ತಪ್ಪಾ? ಅಂತಾ ಕೇಳುವ ಇಂದಿನ ಯುವಕರಲ್ಲಿ ತಮ್ಮ ಭವಿಷ್ಯದ ಬಗ್ಗೆ ನಿಖರವಾದ ಯೋಜನೆ ಇಲ್ಲ. ಪ್ರೀತ್ಸೋದು ತಪ್ಪಲ್ಲ. ಆದರೆ ಅದಕ್ಕೆ ಅದರದ್ದೇ ಆದ ದಾರಿ ಇದೆ. ಇತಿಮಿತಿಗಳಿವೆ. ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಂಡ ನಂತರ ಹಿರಿಯರ ಆಶೀರ್ವಾದ ಪಡೆದು ಬಾಳು ಸಾಗಿಸಿದಲ್ಲಿ ಈ ಪ್ರೀತಿಯ ಸವಿ ಇನ್ನಷ್ಟು ರುಚಿಕರವಾಗಿರುತ್ತೆ. ಅದು ಬಿಟ್ಟು ಕಾಲೇಜು ದಿನಗಳಲ್ಲಿಯೇ ಜತೆಜತೆಯಾಗಿ ಓಡಾಡಿಕೊಂಡು ಓದು ಹಾಳು ಮಾಡಿಕೊಂಡು, ಜೇಬಲ್ಲಿರುವ ದುಡ್ಡು ಹಾಳು ಮಾಡಿಕೊಂಡು ಮನೆಯವರಿಗೆ ಗೊತ್ತಿಲ್ಲದೇ ಹೊರಗೆ ಸಾಲ ಮಾಡಿ ಅದನ್ನೂ ತೀರಿಸಲಾಗದೇ ಒದ್ದಾಡುವುದು ಎಷ್ಟರ ಮಟ್ಟಿಗೆ ಸರಿ. ಹುಡುಗಿ ಮುಂದೆ ಪೋಜ್ ಕೊಡೋಕೆ ಹೊಸ ಹೊಸ ಬಟ್ಟೆ, ಹೊಸ ಮೊಬೈಲ್, ಅದ್ಧೂರಿ ಬೈಕ್ ಇದಕ್ಕೆಲ್ಲಾ ಹಣ ಹೊಂದಿಸೋಕೆ ಪಡುವ ಕಷ್ಟ ಅಷ್ಟಿಷ್ಟಲ್ಲ. ಆದರೆಏನು ಮಾಡೋದು ಇದು ಇಂದಿನ ಯುವಕರ ಟ್ರೆಂಡ್ ಆಗಿ ಹೋಗಿದೆ. ಜತೆಗೆ ಅಂತರ್‍ವ್ಯಕ್ತಿಯ ಆಕರ್ಷಣೆಗಷ್ಟೇ ಸೀಮಿತವಾಗಿದೆ.
ಹಿಂದೊಂದು ಕಾಲವಿತ್ತು ಅಲ್ಲಿ ಪ್ರೇಮಿಗಳು ಈ ತರಹ ಪಾರ್ಕ್ ಆಗಲಿ, ಪಬ್ ಸುತ್ತಾಡುತ್ತಿರಲಿಲ್ಲ. ಬರೀ ಕಣ್ಣಲ್ಲೇ ಪ್ರೇಮ ನಿವೇದನೆ. ಜತೆಗೆ ವಿರಹ ವೇದನೆ.ಹಿರಿಯರ ಮನವೊಲಿಸಿ ಒಂದಾಗೋದು ಹೇಗೆ ಅಂತಾ ಯೋಚಿಸುತ್ತಿದ್ದರು. ಬದುಕಿನ ಚಿಂತನೆಯ ಜತೆಗೆ ಸಾಮರಸ್ಯದ ಬಗ್ಗೆ ಯೋಚಿಸುತ್ತಿದ್ದರು. ಆದರೆ ಇಂದು ಅದೆಲ್ಲಾ ಮಂಗಮಾಯ. ಮಿಸ್ ಕಾಲ, ಮೆಸೇಜ್‍ಲ್ಲಿ ಪ್ರೇಮಾಂಕುರ.ಬೈಕ್, ಬೂಟು, ಥಳಕು, ಬಳುಕು ಇಂದಿನ ಪ್ರೇಮಕ್ಕಿರುವ ಮಾನದಂಡ. ಹೃದಯವೇ ಬಯಸಿದೇ ನಿನ್ನನೇ ಅಂತಾ ಹೇಳಿದ್ದೇ ತಡ. ಈ ಟಚ್ಚಲ್ಲಿ ಏನೋ ಇದೆ ಎನ್ನುವ ಹುಡುಗಿಯರೇ ಹೆಚ್ಚು. ಪಾಲಕರಿಗೆ ಹೇಳೋ ಕೇಳೋ ಪುರಸೊತ್ತಿಲ್ಲ. ಒಪ್ಪಿದ್ರೂ ಸರಿ ಒಪ್ಪದಿದ್ರೂ ಸರಿ. ವಿ. ತಮಗೆ ಏನು ತೋಚುತ್ತೋ ಅದೇ ಸತ್ಯ ಅದೇ ನಿತ್ಯ. ಭವಿಷ್ಯದ ಚಿಂತೆ ಇಲ್ಲ. ಅದ್ಕೊಂದು ಉದ್ದೇಶವೂ ಇಲ್ಲ. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬ ಹಾಡಿನಿಂದ ಪ್ರೇರಿತಗೊಂಡು ಅಧ್ವಾನ ಮಾಡಿಕೊಂಡ ಪರಿಣಾಮ ಇಂದು ಅನೇಕ ಪ್ರೇಮಿಗಳು ಪರಿತಪಿಸುವಂತಾಗಿದ್ದೂ ನಿಜ. ಪ್ರೀತಿಸಿ ಮದುವೇನೂ ಆಗ್ತಾರೆ. ಮಕ್ಕಳೂ ಪಡೀತಾರೆ ಮುಂದೆ ಬದುಕು ಕಟ್ಟಿಕೊಳ್ಳುವ ವಿಚಾರ ಬಂದಾಗ ಆರಂಭ ಕಚ್ಚಾಟ. ನಾನು ಆವಾಗ್ಲೇ ಹೇಳ್ದೆ ಈಗಲೇ ಮದುವೆ ಬೇಡ ಕಣೋ ಮೊದ್ಲು ಸೆಟ್ಲ್ ಆಗು ಅಂತಾ ನನ್ನ ಮಾತು ಕೇಳ್ದಾ ಅಂತಾ ಹುಡುಗಿ. ಏ ಇನ್ನೇನು ಮಾಡ್ಲಿ ಕಣೆ ನಾನು ಸುಮ್ಕಿದ್ರೆ ನಿಮ್ಮಪ್ಪಾ ಬಿಟ್ಟ ಬಿಡ್ತಿದ್ನಾ ಇನ್ನ್ಯಾರಿಗೋ ನಿನ್ನನ್ನ ಕಟ್ಟಿ ಬಿಡ್ತಿದ್ದಾ ಗೊತ್ತಾ ಅಂತೆಲ್ಲಾ ಡೈಲಾಗ್ ಇಂದು ಮಾಮೂಲು. ಇದೆಲ್ಲಾ ಕೇಳಿ, ನೋಡಿ ಎಲ್ಲರಿಗೂ ಈ ಪ್ರೀತಿಸಿ ಮದುವೆಯಾದವರಲ್ಲಿ ಬಹುಪಾಲು ಹಣೆಬರಹಾನೇ ಇಷ್ಟೇ ಅಂದುಕೊಂಡಿದ್ದೇ ಹೆಚ್ಚು. ಆದರೆ ಈ ಹಿಂದೆ ಪ್ರೀತಿಸಿ ಮದುವೆಯಾದವರ ಬಗ್ಗೆ ಹಿರಿಯರೂ ಇಂದಿಗೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅನಿವಾರ್ಯತೆ ಬಂದಾಗ ಪ್ರೀತಿಯನ್ನು ತ್ಯಜಿಸಿದ ತ್ಯಾಗಮೂರ್ತಿಗಳಿದ್ದಾರೆ. ಅವರ ಪ್ರೇಮಪುರಾಣವನ್ನು ಮಾರ್ಮಿಕವಾಗಿ ವಿವರಿಸುತ್ತಾರೆ. ಏಕೆಂದರೆ ಅದರಲ್ಲಿ ಅಷ್ಟೊಂದು ಪಾವಿತ್ರ್ಯತೆ ಇತ್ತು. ಅದನ್ನು ಪಡೆಯಲು ಅವರು ಪ್ರಾಮಾಣಿಕವಾಗಿ ಪಟ್ಟ ಕಷ್ಟ, ತುಳಿದ ಹಾದಿ ಜಾತಿ ಸಂಕೋಲೆಗಳನ್ನು ಕಿತ್ತು ಹಾಕಿಸುವಲ್ಲಿ ಯಶಸ್ವಿಯಾಗಿರುತ್ತಿತ್ತು. ಅದುವೇ ಶಾಶ್ವತ ಪ್ರೇಮ ಅಮರ ಪ್ರೇಮ ಇವತ್ತಿನ ಈ ಲವ್ ಎಲ್ಲೋ ಸ್ವೇಚ್ಛಾಚಾರಕ್ಕೆ ಎಡೆಮಾಡಿಕೊಡುತ್ತಿದೆ ಅಂತಾ ಎನಿಸದಿರದು. ಹಾಗಂತ ಇಂದಿಗೂ ಅಮರಪ್ರೇಮಿಗಳಿಲ್ಲ ಅಂತಲ್ಲ ಆದರೆ ಅವರ ಸಂಖ್ಯೆ ತುಂಬಾನೇ ಕ್ಷೀಣಿಸಿದೆ. ಇಂದಿನ ಅದೆಷ್ಟೋ ಪ್ರೇಮ ಪ್ರಕರಣಗಳು ದುರಾಂತ್ಯ ಕಾಣುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಹಾಗಾಗದಿರಲಿ ಇಂದಿಗೂ ಮುಂದೆಯೂ ಅಮರ ಪ್ರೇಮ ಚಿರಕಾಲವಿರಲಿ.



Post a Comment