
ನೀರು ಮಾರಾಟ: ಏಕಾಂಗಿ ಮೌನ ಹೋರಾಟ
ಸತ್ಯಾಗ್ರಹ ಎನ್ನುವುದು ಇಂದು ಪ್ರಚಾರದ ಸರಕಾಗಿದೆ. ಅದರಲ್ಲೂ ರಾಜಕೀಯ ಭವಿಷ್ಯಕ್ಕಾಗಿ ಧರಣಿ, ಸತ್ಯಾಗ್ರಹ ನಡೆಸುವವರೇ ಹೆಚ್ಚು. ನೈಜ ಸಾಮಾಜಿಕ ಕಳಕಳಿ ಮಾತಂತೂ ದೂರ ಉಳಿಯಿತು.ಇಂತಹ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ನಮ್ಮ ನಿಮ್ಮೆಲ್ಲರ ದೈನಂದಿನ ಅತ್ಯಗತ್ಯ ನೀರು ದುಡ್ಡು ಕೊಟ್ಟು ಕುಡಿಯುವುದರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅದು ಭಿನ್ನ ಸತ್ಯಾಗ್ರಹದ ಮೂಲಕ. ಅದ್ಹೇಗೆ ಇಲ್ಲಿದೆ ವಿವರ...
ನೆಲ, ಜಲ, ಗಾಳಿ ಪರಿಸರ ಮನುಷ್ಯನಿಗೆ ನೀಡಿರುವ ಅಮೂಲ್ಯ ಕೊಡುಗೆಗಳು. ಆದರೆ ಮನುಷ್ಯ ತನ್ನ ದುರಾಸೆ ಮತ್ತು ಉಡಾಫೆಯಿಂದಾಗಿ ಅವುಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾನೆ. ಅದರಲ್ಲೂ ಸಕಲ ಜೀವರಾಶಿಗೆ ಜೀವವಾದ ನೀರನ್ನು ಮಾರಾಟ ವಸ್ತುವನ್ನಾಗಿ ಮಾಡಿಕೊಂಡು ಸಾಕಷ್ಟು ದುಡ್ಡು ಗಳಿಸುತ್ತಿದ್ದಾನೆ. ಕೆಲ ಖಾಸಗಿ ಕಂಪೆನಿಗಳು ಇಂದು ತಮ್ಮಿಷ್ಟದ ದರದಲ್ಲಿ ನೀರಿನ ಮಾರಾಟ ಮಾಡುತ್ತಿವೆ. ಪರಿಸರ ನೀಡಿರುವ ಅಮೂಲ್ಯ ಕೊಡುಗೆಯನ್ನು ಉಚಿತವಾಗಿ ಪಡೆಯಬೇಕಾದ ಜನರು ದುಡ್ಡು ಕೊಟ್ಟು ಪಡೆಯುವ ಸ್ಥಿತಿ ಬಂದೊದಗಿದೆ. ಇದನ್ನು ಬೆಂಗಳೂರಿನ ಆಂಬ್ರೋಸ್ ಡಿಮೆಲ್ಲೋ ಎಂಬುವವರು ಕಳೆದ 13 ವರ್ಷಗಳಿಂದ ಮಾತು ಬಿಟ್ಟು ಕುಡಿಯುವ ನೀರು ಮಾರಾಟವನ್ನು ವಿರೋಧಿಸುತ್ತ ಹೊಸ ಮಾದರಿ ಸತ್ಯಾಗ್ರಹಕ್ಕೆ ಮುನ್ನುಡಿ ಬರೆದಿದ್ದಾರೆ.
ಕನ್ನಡ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು, ಓದಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಪದವಿ ಪೂರ್ಣಗೊಳಿಸಿದ ಬಳಿಕ ಕೆಲಸಕ್ಕೆ ಸುತ್ತಾಡಿದರು. ಅದೇ ವೇಳೆ ಜನರು ಕುಡಿಯುವ ನೀರಿ ಪಡೆಯಲು 10ರಿಂದ 30 ರೂಪಾಯಿ ಕೊಡುವುದನ್ನು ಗಮನಿಸಿದ್ದರು. ಅದೇ ಕಾರಣಕ್ಕೆ ಸಮಾಜಕ್ಕೆ ತಾವು ಏನಾದರೂ ಕೊಡುಗೆ ನೀಡಬೇಕು. ಅದರಲ್ಲೂ ಕುಡಿಯುವ ನೀರು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬು ನಿಶ್ಚಯಿಸಿದರು.
ಎಲ್ಲರೂ ಹೋರಾಟ ಮಾಡುತ್ತಾರೆ. ಅವರಿಗಿಂತ ಹೆಚ್ಚು ಅರ್ಥಪೂರ್ಣವಾದ ಸತ್ಯಾಗ್ರಹ ನಡೆಸಬೇಕು ಎಂದು ನಿರ್ಧರಿಸಿದ ಆಂಬ್ರೋಸ್, ಅಂದೇ ಮಾತು ಬಿಟ್ಟು ಕೇವಲ ಅಕ್ಷರ ರೂಪದಲ್ಲಿ ಜನರೊಂದಿಗೆ ಸಂಭಾಷಣೆ ನಡೆಸಲಾರಂಭಿಸಿದರು. ಸತ್ಯಾಗ್ರಹದ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳ ಬಳಿ ಹೋಗಿ ಕುಡಿಯುವ ನೀರು ಮಾರಾಟ ಜೀವ ವಿರೋಧಿ ಹಾಗೂ ಕುಡಿಯುವ ನೀರು ಮಾರಾಟ ಸಂವಿಧಾನ ವಿರೋಧಿ ಘೋಷಣೆಯುಳ್ಳ ನಾಮಫಲಕವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸಿದರು. ಆಗ ಕೆಲವರು ಈ ಹೋರಾಟಕ್ಕೆ ಜಯ ಸಿಗುತ್ತಾ? ಎಂದು ಪ್ರಶ್ನಿಸಿದ್ದರು. ಅದಕ್ಕೆ ಬೆಲೆ ಕೊಡದೆ ಆಂಬ್ರೋಸ್ ಅವರು ತಮ್ಮ ಹೋರಾಟ ಮುಂದುವರಿಸಿದರು. ಇಂದು ಅವರ ಹೋರಾಟ 13ನೇ ವರ್ಷಕ್ಕೆ ಕಾಲಿಟ್ಟಿದೆ.
ಪ್ರತಿನಿತ್ಯವೂ ಶೌಚಾಲಯ ನೀರು ಸೇವಿಸುವ ಇವರು, ಶುದ್ಧ ನೀರು ಎಂದು ನಂಬಿಸಿ ನೀರು ಮಾರಾಟ ಮಾಡುತ್ತಾರೆ. ನಾನು ಪ್ರತಿನಿತ್ಯ ಶೌಚಾಲಯ ನೀರು ಕುಡಿಯುತ್ತೇನೆ. ನನಗೆ ಇದುವರೆಗೂ ಅನಾರೋಗ್ಯ ಸಮಸ್ಯೆ ಎದುರಾಗಿಲ್ಲ ಎಂದು ಆಂಬ್ರೋಸ್ ಹೇಳುತ್ತಾರೆ. ಅದೇ ರೀತಿ ದಿನಕ್ಕೆ ಒಂದೇ ಬಾರಿ ಊಟ ಮಾಡುವ ಇವರು ಸದಾ ಹಸನ್ಮುಖಿಯೂ ಹೌದು. ಜನರಿಗೆ ಉಚಿತವಾಗಿ ನೀರು ಕೊಡುವುದು ಸರ್ಕಾರದ ಕರ್ತವ್ಯ ಆದರೆ ಅದನ್ನು ಮರೆತಂತೆ ಕಾಣುತ್ತಿದೆ. ಅದಕ್ಕೆ ಪೆಟ್ಟು ನೀಡಲು ಹೋರಾಟ ಆರಂಭಿಸಿದ್ದೇನೆ. ಜತೆಗೆ ಇಂದು ಹೋರಾಟಕ್ಕೆ ಸಾಕಷ್ಟು ಜನರು ಬೆಂಬಲ ನೀಡುತ್ತಿದ್ದಾರೆ. ಆದರಿಂದ ನನ್ನ ಹೋರಾಟವನ್ನು ಮುಂದುವರಿಸಿದ್ದೇನೆ ಎನ್ನುತ್ತಾರೆ . ಜತೆಗೆ ನೀರಿಗೆ ಹೋರಾಟ ನಡೆಸುತ್ತಿರುವ ಆಂಬ್ರೋಸ್ ಅವರನ್ನು ಬೆಂಗಳೂರಿನ ಜನರು ಅಮೃತ ಎಂದು ಹೆಸರಿಟ್ಟಿದ್ದಾರೆ. ಜತೆಗೆ ಮೌನ ಸತ್ಯಾಗ್ರಹಿ ಎಂದು ಅವರು ಚಿರಪರಿಚಿತರು. ಯಾವುದೇ ಕಾರ್ಯಕ್ರಮಕ್ಕೆ ಹೋದರೆ ಅವರು ಅಲ್ಲಿರುತ್ತಾರೆ.
ಬಿಡುವಿನ ವೇಳೆಯಲ್ಲಿ ಕನ್ನಡ ಪುಸ್ತಕ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ತಮ್ಮ ಸತ್ಯಾಗ್ರಹ ಹಾಗೂ ಕನ್ನಡ ಹೋರಾಟಕ್ಕೆ ಬಳಸುತ್ತಾರೆ. ಹಲವು ಸಾಹಿತಿಗಳು ಇವರೊಂದಿಗೆ ಒಡನಾಟ ಹೊಂದಿದ್ದಾರೆ. ಅವರು ಮಾತನಾಡದಿರುವುದರಿಂದ ಹೆಚ್ಚು ಪತ್ರಿಕೆ ಹಾಗೂ ಚಾನೆಲ್‌ಗಳು ಇವರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡಿಲ್ಲ. ಇಂತಹ ವ್ಯಕ್ತಿಯನ್ನು ಬೆಟರ್ ಕರ್ನಾಟಕ ನಿಮಗೆ ಪರಿಚಯಿಸುತ್ತಿದೆ. ಓದಿ ಪ್ರತಿಕ್ರಿಯೆ ತಿಳಿಸಿ ನಮ್ಮ ಕೆಲಸಕ್ಕೆ ಪ್ರೋತ್ಸಾಹಿಸಿ...
ಮನದಾಳದಲ್ಲಿ ಏನಿದೆ:
ಬೆಟರ್ ಕರ್ನಾಟಕ ತಂಡದೊಂದಿಗೆ ತಮ್ಮ ಸತ್ಯಾಗ್ರಹದ ಬಗ್ಗೆ ಆಂಬ್ರೋಸ್ ಮಾತನಾಡಿದ್ದಾರೆ. ಅದು ಹೀಗಿದೆ....
ಆಂಬ್ರೋಸ್ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲಲ್ಲ. 2014ರ ಲೋಕಸಭಾ ಚುನಾವಣೆಯಲ್ಲೂ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಪ್ರಧಾನಿ ಮೋದಿ ಅವರ ಕ್ಷೇತ್ರ ವಾರಾಣಸಿಯಿಂದಲೂ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ, ಅಲ್ಲಿ ನಾಮಪತ್ರ ತಿರಸ್ಕೃತಗೊಂಡಿತ್ತು.
ಬೆಂಗಳೂರು ನಗರದಲ್ಲಿ ಪ್ರತಿದಿನ 20 ಲಕ್ಷ ಕುಡಿಯುವ ನೀರಿನ ಬಾಟಲಿಗಳು ಮಾರಾಟವಾಗುತ್ತವೆ. ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ನೀರನ್ನು ಬಳಸಿ, ಬಾಟಲಿಯಲ್ಲಿ ಹಾಕಿ ನಮಗೆ ನೀಡುತ್ತಿವೆ. ಅವುಗಳು ಕೋಟ್ಯಂತರ ರೂಪಾಯಿ ಗಳಸಿತ್ತಿವೆ. ಅದೇ ಕಾರಣಕ್ಕೆ ಇಂದು ಕುಡಿಯುವ ನೀರು ಮಾರಾಟ ವಿರೋಧಿಸಿ ಸತ್ಯಾಗ್ರಹ ನಡೆಸುತ್ತಿದ್ದೇನೆ. ಇದಕ್ಕೆ ಮುಂದೊಂದು ದಿನ ಜಯ ಸಿಗುತ್ತದೆ ಎಂಬ ವಿಶ್ವಾಸವಿದೆ.
ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ ಒಂದು ಊಟ ಸಾಕು. ಸಂಜೆಯವರೆಗೂ ಉಪವಾಸವಿದ್ದು, ಒಂದೇ ಬಾರಿ ಊಟ ಮಾಡುತ್ತೇನೆ. ಶೌಚಾಲಯು ನೀರು ಕುಡಿದು ಅದು ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತೋರಿಸುತ್ತೇನೆ . ಫುಟ್‌ಪಾತ್‌ನಲ್ಲಿ, ವಿವಿಧ ಸಂಘಟನೆ ಕಚೇರಿ ಬಳಿ ಅಥವಾ ರೈಲ್ವೆ ನಿಲ್ದಾಣದಲ್ಲಿ ಮಲಗುತ್ತೇನೆ. ರಾಜ್ಯದ ಜನರೆಲ್ಲರೂ ಕುಡಿಯುವ ನೀರಿನ ವಿಷಯದಲ್ಲಿ ಜಾಗೃತರಾಗಬೇಕು. ಜತೆಗೆ ತಮ್ಮೂರಿನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು .



Post a Comment