ದಾಂಡೇಲಿ ಅನನ್ಯ ಕಾಡು ಪ್ರಾಣಿಗಳಿಗೆ ಮಡಿಲು. ಈ ಊರಿನ ಹೆಸರು ಕೇಳಿದಾಕ್ಷಣ ನೆನಪಾಗೋದು ನಿತ್ಯ ಹರಿದ್ವರ್ಣದ ದಟ್ಟ ಕಾಡು, ಪೇಪರ್ ಮಿಲ್ . ತನ್ನ ಮಡಿಲಲ್ಲಿ ಅಪಾರ ವನ್ಯಜೀವಿ ಸಂಪತ್ತು ಹೊಂದಿರುವ ದಾಂಡೇಲಿ ಅಭಯಾರಣ್ಯ ನಿಸರ್ಗ ಪ್ರಿಯರ ನೆಚ್ಚಿನ ತಾಣ. ಈ ವನ್ಯಜೀವಿಧಾಮಕ್ಕೆ ದೇಶದ ಅತ್ಯುತ್ತಮ ವನ್ಯಜೀವಿ ಧಾಮ ಎಂಬ ಪ್ರಶಸ್ತಿ ಸಿಕ್ಕಿದೆ.
ಹಾಲಿಡೇ ಐಕ್ಯೂ ಎಂಬ ಸಂಸ್ಥೆ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಈ ಅಂಶ ಕಂಡುಬಂದಿದೆ.867 ಚ.ಕಿ.ಮೀ ವ್ಯಾಪ್ತಿ ಹೊಂದಿರುವ ಈ ಅಭಯಾರಣ್ಯ ವಿಶ್ವದಾದ್ಯಂತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. 2006ರಲ್ಲಿ ಈ ಪ್ರದೇಶವನ್ನು ಅಣಸಿ-ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು.ಮೈಸೂರು ನಂತರ ಆನೆ ಸಂರಕ್ಷಿತ ತಾಣ ಎಂದರೆ ಅದು ದಾಂಡೇಲಿಯೇ. ಹಾರ್ನ್ ಬಿಲ್ ಹಕ್ಕಿ ಇಲ್ಲಿನ ಮತ್ತೊಂದು ವಿಶೇಷತೆ. 200ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳನ್ನು ಹೊಂದಿರುವ ಇಲ್ಲಿನ ಕಾಡು ಅರಸಿ ಹಾರ್ನ್ ಬಿಲ್ ಹಕ್ಕಿಗಳಿಗೆ ಸೂಕ್ತ ತಾಣ. ಇಲ್ಲಿ 4 ಮಾದರಿ ಹಾರ್ನ್ ಬಿಲ್ ಹಕ್ಕಿಗಳು ನೋಡಲು ಸಿಗುತ್ತವೆ.
ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿಯೇ ವಿಶಿಷ್ಟವಾದ ಈ ದಾಂಡೇಲಿ ಅಭಯಾರಣ್ಯ ಪ್ರದೇಶ, ಎಲೆಯುದುರಿಸುವ ತೇವಾಂಶದ ಅರೆ ಹರಿದ್ವರ್ಣ ಸಸ್ಯ ವರ್ಗಗಳಿಂದ ಶ್ರೀಮಂತವಾದುದು. ಒಂದು ಕಾಲದ ದಂಡಕಾರಣ್ಯ ಇಂದು ದಾಂಡೇಲಿ. ಇದನ್ನು ಮುಖ್ಯ ಕೇಂದ್ರವಾಗಿಟ್ಟು ಕೊಂಡು ಕೂಡ ಅಣಶಿ ಉದ್ಯಾನ, ದಾಂಡೇಲಿ ಅಭಯಾರಣ್ಯ ಪ್ರದೇಶಗಳನ್ನು ವೀಕ್ಷಿಸಬಹುದು.
ದಾಂಡೇಲಿ, ಕವಳಾಗುಹೆ, ಸಿಂಥೇರಿ ರಾಕ್ಸ್ , ಅಂಬಿಕಾನಗರ, ಕುಳಗಿ ನಿಸರ್ಗಧಾಮ,ಹಳಿಯಾಳನೋಡಿಬರಬಹುದು.ದಾಂಡೇಲಿಯಲ್ಲಿ ವೆಸ್ಟ್‌ಕೋಸ್ಟ್ ಪೇಪರ್ ಮಿಲ್ ಇದೆ. ಕಾಳಿನದಿ ತಟದ ದಾಂಡೇಲಿಯ ಆರಾಧ್ಯ ದೈವ ದಾಂಡೇಲಪ್ಪ ದೇವರು.
ಕಾಳಿನದಿಯಲ್ಲಿ ರಾಫ್ಟಿಂಗ್ ಅವಕಾಶ ಇದೆ. ಸಿಂಥೇರಿ ರಾಕ್ಸ್ ಪ್ರಕೃತಿಯ ರಮ್ಯ ತಾಣ, ಜೋಯಿಡಾದಿಂದ 20ಕಿ.ಮಿ. ದೂರದಲ್ಲಿದೆ. ಕಸೇರಿ ನದಿಯಿಂದ ಉಂಟಾದ ತಾಣ. ಕಲ್ಲುಗಳ ಮನೋಜ್ಞತೆ ಮಂತ್ರಮುಗ್ಧವಾಗಿಸುತ್ತದೆ.ಸೈಕ್ಸ್ ಪಾಯಿಂಟ್. ಸುಂದರ ಕಣಿವೆಯ ಮಧ್ಯೆ ಸೂರ್ಯೋದಯ, ಸೂರ್ಯಾಸ್ತ ರಮಣೀಯ.
ಇದರ ಸಮೀಪವೇ ಬೊಮ್ಮನಳ್ಳಿ ಪಿಕ್ ಅಪ್ ಡ್ಯಾಂ, ಸೂಪಾ ಡ್ಯಾಂ, ಗಣೇಶ ಗುಡಿ ಇದೆ. ದಾಂಡೇಲಿ ಯಿಂದ 20ಕಿ.ಮಿ. ದೂರ. ಹಳಿಯಾಳದಲ್ಲಿರುವ ಶಿವಾಜಿ ಕೋಟೆ, ಮಲ್ಲಿಕಾರ್ಜುನ ದೇವಾಲಯ ತುಳಜಾ ಭವಾನಿ ಇದೆ. ಕ್ಯಾಸಲ್ ರೋಕ್ ಸಮೀಪದ ದೂದ್ ಸಾಗರ ಜಲಪಾತ ಇನ್ನೊಂದು ಪ್ರವಾಸಿ ತಾಣ. ಹಳಿಯಾಳದಿಂದ 38 ಕಿ.ಮಿ. ದೂರದಲ್ಲಿ ಮಿಂಚೊಳ್ಳಿ ಜಲಪಾತವಿದೆ. ಕಾಳಿ ನದಿ ನಿರ್ಮಿಸಿದ ಜಲಪಾತ ಸುಮಾರು 300 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ.





Post a Comment