ಹುಲಿ ಸಂಖ್ಯೆ ವೃದ್ಧಿಯಾಯ್ತು ಬುದ್ಧಿ !
ಕರುನಾಡು ಸೇರಿದಂತೆ ದೇಶದ ವನ್ಯಜೀವಿಪ್ರಿಯರಿಗೊಂದು ಸಂತಸದ ಸುದ್ದಿ. ಜಾಗತಿಕವಾಗಿ ಹುಲಿ ಸಂತತಿ ಶೇ 22 ರಷ್ಟು ವೃದ್ಧಿಯಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. 201ರಲ್ಲಿದ್ದ 3200 ಸಂಖ್ಯೆ ಇದೀಗ 3890ಕ್ಕೆ ಏರಿದೆ. ಗ್ಲೋಬಲ್ ಟೈಗರ್ ಫೊರಂ ಮತ್ತು ವರ್ಲ್ಡ್ ವೈಲ್ಡ ಲೈಫ್ ಫಂಡ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಿಂದ ಈ ಅಂಶ ತಿಳಿದು ಬಂದಿದೆ.
ಬದಲಾದ ಸನ್ನಿವೇಶದಲ್ಲಿ ಹುಲಿ ಜನಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಆತಂಕ ತಲೆದೋರಿತ್ತು. ಈ ಮಧ್ಯೆ ಈ ಸುದ್ದಿ ಆಶಾಕಿರಣವಾಗಿ ಹೊರ ಹೊಮ್ಮಿದೆ.2014ರ ಸಮೀಕ್ಷೆ ಪ್ರಕಾರ ಭಾರತದಲ್ಲಿ 2226 ಹುಲಿಗಳಿವೆ ಎಂಬ ಮಾಹಿತಿಯೂ ಲಭ್ಯವಾಗಿದೆ.ಈ ಮುಂಚೆ ಈ ಸಂಖ್ಯೆ 1706ರಷ್ಟಿತ್ತು. ಭಾರತ, ರಷ್ಯಾ, ನೇಪಾಳ ಮತ್ತು ಭೂತಾನ್ ನಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ವೃದ್ಧಿಯಾಗಿದೆ.ಕಳೆದ ಒಂದು ದಶಕದಲ್ಲಿ ಇಷ್ಟೊಂದು ಏರಿಕೆ ಇದೇ ಮೊದಲನೇ ಬಾರಿ. ಈ ಬೆಳವಣಿಗೆ ನೋಡಿದರೆ ಒಂದಂತೂ ಸ್ಪಷ್ಟ ನಾವಿನ್ನೂ ವನ್ಯಜೀವಿ ಬೆಳೆಸಬಹುದು.ಅರಣ್ಯ ಇಲಾಖೆ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ವನ್ಯಜೀವಿ ಸಂತತಿ ವೃದ್ಧಿ ಕೆಲಸ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡಬಹುದು ಎನ್ನಲು ಈ ಬೆಳವಣಿಗೆ ಪ್ರೋತ್ಸಾಹದಾಯಕವಾಗಿದೆ.
ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಹೇಳಿದಂತೆ ಹುಲಿ ಸಂರಕ್ಷಣೆಗಾಗಿ ಪ್ರಸ್ತುತ ವರ್ಷ 380 ಕೋಟಿ ತೆಗೆದಿರಿಸಲಾಗಿದೆ. ಇಷ್ಟೊಂದು ಬೃಹತ್ ಅನುದಾನ ಲಭ್ಯವಾಗಿದ್ದು ಇದೇ ಮೊದಲು ಎಂದು ಹೇಳಲಾಗುತ್ತದೆ. ಅಂದರೆ ಸರಕಾರವು ಕೂಡ ವನ್ಯಜೀವಿ ಸಂರಕ್ಷಣೆಯ ಮಹತ್ವ ಅರಿತಂತಾಗಿದೆ. ಹಾಗಂತ ನಾವು ಇಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳುವಂತಿಲ್ಲ. ನೂರು ವರ್ಷದ ಇತಿಹಾಸ ನೋಡಿದರೆ ಹುಲಿಗಳ ಸಂಖ್ಯೆ 1ಲಕ್ಷವಿತ್ತು. ಕಾಲಕ್ರಮೇಣ ಇಳಿಯುತ್ತ ಬಂದಿರುವುದು ಬೇಸರದ ಸಂಗತಿಯೇ ಸರಿ. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ವರ್ಲ್ಡ್ ವೈಲ್ಡ ಲೈಫ್ ಫಂಡ್ Tx2 ಎಂಬ ಹೊಸ ಯೋಜನೆ ಹಾಕಿಕೊಂಡಿದೆ.ದಕ್ಷಿಣ ಏಷ್ಯಾದ ಭಾಗದಲ್ಲಿ ಹುಲಿ ಸಂರಕ್ಷಣೆ ನಿಟ್ಟಿನಲ್ಲಿ ಅಲ್ಲಿನ ಸರಕಾರಗಳು ಕೈಗೊಂಡ ಕ್ರಮ ಶೂನ್ಯ ಎಂದೇ ಹೇಳಬಹುದು. ನಮ್ಮ ಬಾರತದಲ್ಲೂ ವನ್ಯಜೀವಿಗಳ ಬೇಟೆ ನಿಂತಿಲ್ಲ. ಮಾರ್ಚ್ 31 ಅಂತ್ಯಕ್ಕೆ ಈ ವರ್ಷ 25ಕ್ಕೂ ಹೆಚ್ಚು ಹುಲಿಗಳು ಅಸುನೀಗಿವೆ. ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಎನ್ಎಚ್-6 ಮತ್ತು 7ರ ಅಗಲೀಕರಣ ಯೋಜನೆಯಿಂದಲೂ ಹುಲಿಗಳ ನೆಮ್ಮದಿಗೆ ಭಂಗಬಂದಿದೆ.




Post a Comment