ಭೂಮಿ ಮೇಲಿನ ಸಸ್ಯ ಸಂಪತ್ತು ಕ್ರಮೇಣ ನಶಿಸುತ್ತಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರದ ಮೇಲೆ ನಾನಾ ರೀತಿಯಿಂದ ಆಕ್ರಮಣ ಮಾಡುತ್ತಿದ್ದಾನೆ. ಪರಿಣಾಮ ಅರಣ್ಯವಿಲ್ಲದೆ ಪಕ್ಷಿ, ಪ್ರಾಣಿಗಳು ಅನಾಥವಾಗಿ ದುರ್ಮರಣಕ್ಕೀಡಾಗುತ್ತಿವೆ.
ಅಂತಹ ಪಕ್ಷಿ ಸಂಕುಲ ಕಾಪಾಡಲು ಇಲ್ಲೊಬ್ಬ ವ್ಯಕ್ತಿ ತನ್ನ ಪ್ರತಿತಿಂಗಳ ಸಂಬಳದ ಶೇ. 40ರಷ್ಟು ಹಣವನ್ನು ಪಕ್ಷಿಗಳ ಆರೈಕೆಗೆ ಮೀಸಲಿಟ್ಟಿದ್ದಾನೆ. ಆತನೇ ತಮಿಳುನಾಡು ರಾಜ್ಯದ ಚನ್ನೈನ ಶೇಖರ.
ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಶೇಖರನ ಮನೆಗೆ ಪ್ರತಿನಿತ್ಯವೂ ಬೆಳಗ್ಗೆ 6 ಹಾಗೂ ಸಂಜೆ 6ಕ್ಕೆ 2000 ಸಾವಿರಕ್ಕೂ ಅಧಿಕ ಗಿಳಿಗಳು ಬರುತ್ತಿದ್ದು, ಅವುಗಳಿಗೆ ಪ್ರತಿನಿತ್ಯವೂ ಶೇಖರ ಆಹಾರ ನೀಡುತ್ತಿದ್ದಾರೆ. ಇದ್ದ ಸಂಬಳ ಸಾಲುವುದಿಲ್ಲ ಎನ್ನುವ ಜನರಿರುವ ಇಂದಿನ ದಿನಮಾನಗಳಲ್ಲಿ ಶೇಖರ ಮಾದರಿ ವ್ಯಕ್ತಿ ಎನಿಸಿಕೊಳ್ಳುತ್ತಾರೆ.
ಶೇಖರ ಅವರ ಮನೆಗೆ ಬರುವ ಗಿಳಿಗಳನ್ನು ನೋಡುವುದೇ ಒಂದು ಸಂಭ್ರಮ. ಪ್ರತಿನಿತ್ಯ ನೂರಾರು ಜನರು ದೂರದಿಂದಲೇ ಗಿಳಿಗಳನ್ನು ಕಂಡು ಖುಷಿಪಡುತ್ತಿದ್ದಾರೆ. ಮಕ್ಕಳಂತೂ ಶೇಖರನ ಜೊತೆಗಿದ್ದು ಗಿಳಿಮರಿಗಳನ್ನು ಮುದ್ದಾಡುತ್ತಿದ್ದು, ಅವರ ಮನೆ ಗಿಳಿಗಳ ವಾಸಸ್ಥಳವಾಗಿ ಮಾರ್ಪಟ್ಟಿದೆ.
ಗಿಳಿಗಳು ಬಂದಿದ್ದು ಹೇಗೆ?-------
ಮನುಷ್ಯ ಸ್ವಾರ್ಥಿಯಾಗಿದ್ದರಿಂದ ತನ್ನ ಬೆಳವಣಿಗೆಯನ್ನೇ ನೋಡಿಕೊಳ್ಳುತ್ತಾನೆ. ಆದರೆ ಕೆಲವರು ತಮ್ಮೊಂದಿಗೆ ಇತರರ ಬೆಳವಣಿಗೆಗೂ ಪ್ರೋತ್ಸಾಹಿಸುತ್ತಾರೆ. ಆದರೆ ಇಲ್ಲಿ ಶೇಖರ ಇತರರಿಗಿಂತ ಭಿನ್ನ.
ತಮಿಳುನಾಡಿನಲ್ಲಿ ಸುನಾಮಿ ಬಂದ ವೇಳೆಯಲ್ಲಿ ಸಾವಿನ ದವಡೆಯಲ್ಲಿದ್ದ ಎರಡು ಗಿಳಿಗಳನ್ನು ಕಾಪಾಡಿ ಮನೆಗೆ ತಂದಿದ್ದ ಶೇಖರ, ಅವುಗಳಿಗೆ ಮನೆ ಛಾವಣಿಯಲ್ಲಿ ಆಹಾರ ನೀಡಿ ಆಶ್ರಯ ನೀಡಿದ್ದರು. ಅವುಗಳ ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಹಾರಿ ಹೋಗಿದ್ದವು. ಆದರೆ ಪ್ರತಿನಿತ್ಯವೂ ಶೇಖರ ನೀಡುತ್ತಿದ್ದ ಅಕ್ಕಿ ಮಿಶ್ರಿತ ಆಹಾರಕ್ಕಾಗಿ ಗಿಳಿಗಳು ಆತನ ಮನೆ ಛಾವಣಿಗೆ ಬಂದು ಕುಳಿತುಕೊಳ್ಳುತ್ತಿದ್ದವು. ಅದನ್ನು ಗಮನಿಸಿದ ಶೇಖರ, ಪ್ರತಿನಿತ್ಯವೂ ಹೆಚ್ಚೆಚ್ಚು ಆಹಾರವನ್ನು ಛಾವಣಿ ಮೇಲಿಡಲು ಆರಂಭಿಸಿದರು. ಸದ್ಯ 2000ಕ್ಕಿಂತಲೂ ಹೆಚ್ಚು ಗಿಳಿಗಳು ಛಾವಣಿಗೆ ಬರುತ್ತಿದ್ದು, ಪ್ರತಿನಿತ್ಯ 4ಕ್ಕೆ ಏಳುವ ಶೇಖರ ಅವುಗಳಿಗೆ ಛಾವಣಿಯಲ್ಲಿ ಆಹಾರವಿಡುವುದನ್ನು ಮರೆತಿಲ್ಲ. ಗಿಳಿಗಳೊಂದಿಗೆ ಪಾರಿವಾಳ ಸೇರಿ ಹಲವು ಪಕ್ಷಿಗಳು ಶೇಖರ ಮನೆಯ ಪ್ರತಿನಿತ್ಯದ ಅತಿಥಿಗಳಾಗಿವೆ. ಶೇಖರ ಕುರಿತು ಸಾಕ್ಷ್ಯಚಿತ್ರವೊಂದು ರಚಿತವಾಗಿದ್ದು, ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
(ಕೃಪೆ: ಟಿಬಿಐ)
ವಿಡೀಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ....






Post a Comment