ಮಕ್ಕಳಿಗೆ ಅವರ ಹಕ್ಕು ಮನದಟ್ಟು ಮಾಡಿಕೊಡುವ ಉದ್ದೇಶದಿಂದ ರಾಜಸ್ತಾನ್ ರಾಜ್ಯ ಸರ್ಕಾರವೂ ಶಾಲಾ ಪಠ್ಯದಲ್ಲಿ "ಮಕ್ಕಳ ಹಕ್ಕು" ಪಾಠ ಸೇರ್ಪಡೆ ಮಾಡಲು ಚಿಂತನೆ ನಡೆಸಿದೆ.
ಇಂದಿನ ಆಧುನಿಕ ಯುಗದಲ್ಲಿ ಮಕ್ಕಳ ಮೇಲೆ ಶೋಷಣೆಗಳು ಹೆಚ್ಚಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಮಕ್ಕಳಿಗೆ ಅವರ ಹಕ್ಕು ಕುರಿತು ಜಾಗೃತಿ ಮೂಡಿಸಲು ಪಾಠದೊಂದಿಗೆ ಪ್ರತಿ ಶಾಲೆಯಲ್ಲಿಯೂ "ಮಕ್ಕಳ ಹಕ್ಕು ಕ್ಲಬ್' ತೆರೆಯಲು ರಾಜಸ್ತಾನ್ ಮುಂದಾಗಿದೆ. ಮಕ್ಕಳ ಹಕ್ಕು ಇಲಾಖೆ, ಯುನಿಸೆಫ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಯೋಜನೆ ರೂಪಗೊಳ್ಳಲಿದೆ.
ಈ ಕುರಿತು ರಾಜಸ್ತಾನದಲ್ಲಿ ಮಕ್ಕಳ ಹಕ್ಕು ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ವಿಷಯ ಪ್ರಸ್ತಾಪಿಸಿದ ಸಾಮಾಜಿಕ ನ್ಯಾಯ ಸಚಿವ ಅರುಣ ಚತುರ್ವೇದಿ, ರಾಜ್ಯದ 5 ಲಕ್ಷ ಮಕ್ಕಳು ಪಾಲ್ಗೊಳ್ಳುವ ಮಕ್ಕಳ ಹಕ್ಕು ಕ್ಲಬ್ ಸ್ಥಾಪಿಸುವ ಬಗ್ಗೆ ಮಕ್ಕಳ ಹಕ್ಕು ಇಲಾಖೆ ಚಿಂತನೆ ನಡೆಸಿದೆ. ಮುಂದಿನ 5 ವರ್ಷದಲ್ಲಿ ಎಲ್ಲ ಮಕ್ಕಳು ತಮ್ಮ ಹಕ್ಕು ತಿಳಿದುಕೊಳ್ಳುವಂತೆ ಮಾಡುವ ಗುರಿ ಇದೆ ಎಂದರು.
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಾಸುದೇವ ದೇವನಾನಿ, ಶಾಲಾ ಪಠ್ಯದಲ್ಲಿ ಮಕ್ಕಳ ಹಕ್ಕು ಕುರಿತು ಪಾಠ ಸೇರಿಸಲಾಗುತ್ತಿದ್ದು, ಅದು ಮಕ್ಕಳ ಹಕ್ಕು ಹಾಗೂ ಅವರಿಗೆ ಹೆಚ್ಚು ಅವಕಾಶ ನೀಡಲು ಅನುಕೂಲವಾಗಲಿದೆ. ಎಂದರು.
ರಾಷ್ಟ್ರೀಯ ಹಕ್ಕು ರಕ್ಷಣಾ ಆಯೋಗದ ನಿರ್ದೇಶನಗಳಂತೆ, ಉಳಿವಿನ ಹಕ್ಕು, ರಕ್ಷಣೆ ಹಕ್ಕು, ಭಾಗವಹಿಸುವಿಕೆ ಹಕ್ಕು, ಅಭಿವೃದ್ಧಿ ಹಕ್ಕು ಶೀರ್ಷಿಕೆಯಡಿ ಪಠ್ಯ ರಚನೆಗೆ ಸಿದ್ಧತೆ ನಡೆದಿದೆ. ಅದು ಜಾರಿಯಾದರೆ ರಾಜಸ್ತಾನ ಮಕ್ಕಳು, ತಮ್ಮ ಹಕ್ಕುಗಳ ಕುರಿತು ಜಾಗೃತರಾಗಲಿದ್ದಾರೆ.




Post a Comment