ಸಾಧನಾ ಭೂಮಿ ಎನಿಸಿದ ಭಾರತ ಪುಣ್ಯಭೂಮಿ. ವೀರರನಾಡು. ಹೆಮ್ಮೆಯ ಬೀಡು ಬಹುಸಂಸ್ಕೃತಿಯ ನೆಲೆವೀಡು. ಅದರಲ್ಲೂ ಉತ್ತರ ಕರ್ನಾಟಕ ಕೆಚ್ಚೆದೆಯ ಸಾಹಸಿಗಳ ತವರು ಎಂದರೆ ಅತಿಶಯೋಕ್ತಿಯಾಗದು.ಇದನ್ನು ಪುಷ್ಟೀಕರಿಸುವ ಉದಾಹರಣೆಗಳು ನಮ್ಮ ಸುತ್ತ ಹಲವು. ಅದಕ್ಕೊಂದು ಸೇರ್ಪಡೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ವೀರಯೋಧ ಹನುಮಂತಪ್ಪ ಕೊಪ್ಪದ್ ನ ಸಾಹಸಗಾಥೆ. ಉತ್ತರದ ಸಿಯಾಚಿನ್ ಎಲ್ಲಿ ದಕ್ಷಿಣದ ಬೆಟದೂರೆಲ್ಲಿ. ಆದರೆ ದೇಶಸೇವೆಯ ಕರೆ ಈ ವೀರಯೋಧನನ್ನು ಕೈ ಬೀಸಿ ಕರೆಯಿತು. ಶತ್ರುಗಳ ಒಳನುಸುಳುವಿಕೆ ತಡೆಯಲು ಹಗಲಿರುಳು ಹೋರಾಡಿದ ಶ್ರಮಿಸಿದ ಹನುಮಂತಪ್ಪ .ಸತತ 6 ದಿನ ಹಿಮದಡಿ ಸಿಲುಕಿದರೂ ಧೈರ್ಯವನ್ನು ಕುಗ್ಗಿಸಿಕೊಳ್ಳದೇ ಗೆದ್ದು ಬಂದ ಛಾತಿ ಈತನದು. ಬಹುಶಃ ಆ ದೇವರಿಗೂ ಈತನ ಧೈರ್ಯ, ಸಾಹಸ ಮೇಲೆ ಅಸೂಯೆ ಇತ್ತೇನೋ ಕೂಡಲೇ ತನ್ನ ಬಳಿ ಕರೆಸಿಕೊಂಡ. ಆಡು ಭಾಷೆಯಲ್ಲಿ ಹೇಳಬೇಕೆಂದರೆ ಕೊಟ್ಟು ಕಸಕೊಂಡ.
ಈ ಮಧ್ಯೆ ಹನುಮಂತಪ್ಪ ಇಡೀ ದೇಶಕ್ಕೆ, ಅದರಲ್ಲೂ ವಿಶೇಷವಾಗಿ ಯುವಕರಿಗೆ ಒಂದು ಸಂದೇಶವನ್ನು ಕೊಟ್ಟಿದ್ದಂತೂ ಸತ್ಯ. ಅದುವೇ ದೇಶಸೇವೆಯ ದಿಟ್ಟ ಸಂದೇಶ. ದಿನ ಬೆಳಗಾದರೆ ಫೇಸ್ಬುಕ್, ವಾಟ್ಸಾಪ್, ಟ್ವೀಟರ್ ಎನ್ನುತ್ತ ಲಕ್ಷ ಲಕ್ಷ ಸಂಬಳದ ಕನಸು ಕಾಣುತ್ತ ಮತ್ತು ಅದನ್ನೇ ಗುರಿಯಾಗಿಸಿಕೊಂಡು ತಮ್ಮಶಕ್ತಿಯನ್ನು ಪೋಲು ಮಾಡುತ್ತಿರುವ ಇಂದಿನ ಅನೇಕ ಯುವಕರಿಗೆ ದೇಶ ಕಾಯುವುದಕ್ಕಿಂತ ಮಿಗಿಲಾದ ಕೆಲಸ ಮತ್ತೊಂದಿಲ್ಲ ಎನ್ನುವುದು ಹನುಮಂತಪ್ಪನಿಂದ ತಿಳಿಯುವಂತಾಗಿದ್ದು ವಿಶೇಷ. ಹಿಮದಡಿ ಸಿಕ್ಕು ಮತ್ತೆ ಬದುಕಿ ಬಂದಾಗ ಆತನ ತಾಯಿ ಬಸಮ್ಮ ನನ್ನ ಮಗ ಆರಾಮ ಆಗಲಿಯಪ್ಪಾ ಮತ್ತ ನಾ ಅವನ ದೇಶದ ಗಡಿ ಕಾಯಾಕ ಕಳಸ್ತೇನಿ ಎನ್ನುವ ಮಾತುಗಳನ್ನು ಹೇಳಿದಾಗ ಆ ತಾಯಿಯ ರಕ್ತದಲ್ಲೇ ದೇಶಸೇವೆಯ ತುಡಿತ ಎಷ್ಟಿತ್ತು ಎಂಬುದು ಸ್ಪಷ್ಟ. ಅವ ಬದುಕಿ ಬಂದರ ಸಾಕ ನಾ ಎಷ್ಟರ ಚಾಕರಿ ಮಾಡಿಯಾದ್ರೂ ಅವನನ್ನ ಸುಧಾರಿಸಿ ಮತ್ತ ದೇಶಸೇವೆಗೆ ಕಳಿಸ್ತೇನಿ ಎನ್ನುವ ಸಹೋದರನ ಮಾತು ಇಡೀ ಕುಟುಂಬದ ದೇಶಪ್ರೇಮವನ್ನು ಸಾರುತ್ತಿತ್ತು.ಶಾಲಾ ದಿನಗಳಿಂದಲೇ ಸೇನೆ ಸೇರುವ ತುಡಿತ ಹನುಮಂತಪ್ಪನದಾಗಿತ್ತು. ಇದು ನಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಅದು ಬಿಟ್ಟು ನಾನು ಸಾಫ್ಟವೇರ್ ಎಂಜನಿಯರ್ ಆಗಬೇಕು, ಡಾಕ್ಟರ್ ಆಗಬೇಕು ಫಾರಿನ್ ಹೋಗಬೇಕು. ಬೆಂಗಳೂರಾಗ ಸೆಟಲ್ ಆಗಬೇಕು ಎನ್ನುವವರಿಗೆ ಹನುಮಂತಪ್ಪನ ಧ್ಯೇಯ ವಾಕ್ಯ ಮಾದರಿಯಾಗಬೇಕು. ಸ್ಪೂರ್ತಿಯ ಸೆಲೆಯಾಗಬೇಕು.
ಹನುಮಂತಪ್ಪನಂತಹ ಇನ್ನೂ 9 ಜನ ಬೆಟದೂರಿನ ವೀರಯೋಧರು ನಮ್ಮ ಸೇನೆಯಲ್ಲಿದ್ದಾರೆ. ಬೆಟದೂರು ರಾಷ್ಟ್ರದ ಹಿತ ಕಾಪಾಡುವಲ್ಲಿ ನೀಡಿದ ಮತ್ತು ನೀಡುತ್ತಿರುವ ಕೊಡುಗೆ ಅಪಾರ. ಇಂತಹ ನೂರೆಂಟು ಅಷ್ಟೇ ಏಕೆ ಸಾವಿರಾರು ಬೆಟದೂರು ನಮ್ಮ ಮಧ್ಯೆ ಪುಟಿದೇಳಲಿ. ಅದೇ ರೀತಿ ದೇಶಸೇವೆಯ ತುಡಿತದ ಲಕ್ಷಾಂತರ ಹನುಮಂತಪ್ಪ ನಮ್ಮ ಮಧ್ಯೆ ಹುಟ್ಟಿ ಬರಲಿ ಎನ್ನುವುದಷ್ಟೇ ನಮ್ಮ ಆಶಯ. ಹನುಮಂತಪ್ಪ ಅಮರ್ ರಹೆ !








Post a Comment