ಅವರು ಕಾನೂನು ರಕ್ಷಿಸುವ ಪೇದೆ. ಆದರೆ ಜೀವನಕ್ಕೆಂದು ಸರ್ಕಾರ ನೀಡುವ ಪೂರ್ತಿ ಸಂಬಳವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದಾರೆ.
ಹೌದು. ಕೊಲ್ಕತ್ತಾ ನ್ಯೂ ಅಲಿಪುರೆ ಪೊಲೀಸ್ ಠಾಣೆ ಪೇದೆ ಅರೂಪ್ ಮುಖರ್ಜಿ, ತನಗೆ ಬರುವ ಪ್ರತಿ ತಿಂಗಳ ಸಂಬಳವನ್ನು ಶಾಲೆಯೊಂದಕ್ಕೆ ನೀಡುತ್ತಿದ್ದಾರೆ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದು ಅವರ ಮಹದಾಸೆಯಾಗಿದೆ.
ಮುಖರ್ಜಿಯವರ ಪೂರ್ತಿ ಸಂಬಳವು ಕೊಲ್ಕತ್ತಾದ ಪುಂಚ್ ನಬಡೀಷ್ ಮಾದರಿ ಶಾಲೆ ನಿರ್ವಹಣೆ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಖರ್ಚಾಗುತ್ತಿದೆ. ಆ ಶಾಲೆಯಲ್ಲಿ ಬಡ ಹಾಗೂ ಶೋಷಿತ ಸಮುದಾಯದ 40 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರೆಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಅವರೆಲ್ಲ ಕಾರ್ಯನಿರ್ವಹಿಸಬೇಕೆಂಬ ಇಚ್ಛೆಯಿಂದ ಮುಖರ್ಜಿ ಸಂಬಳ ತ್ಯಜಿಸುತ್ತಿದ್ದಾರೆ.
ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಮುಖರ್ಜಿ, ಕಷ್ಟದಲ್ಲಿಯೇ ಶಿಕ್ಷಣ ಪಡೆದು ಪೇದೆಯಾಗಿ ಸೇವೆ ಆರಂಭಿಸಿದರು. ತಮ್ಮ ಜೀವನದ ದಾರಿಗಳನ್ನು ಗಮನಿಸಿದ ಅವರು, ತನ್ನ ಸ್ಥಿತಿ ಯಾರಿಗೂ ಬರಬಾರದೆಂದು ಕಷ್ಟದಲ್ಲಿರುವ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ.
ಪೊಲೀಸ್ ಕ್ವಾಟರ್ಸ್ನಲ್ಲಿ ವಾಸವಿರುವ ಮುಖರ್ಜಿ, ಅಲ್ಲಿ ನೀಡುವ ಆಹಾರ ಸೇವಿಸಿ ಕರ್ತವ್ಯದೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
ಸದ್ಯ ಪುಂಚ್ ನಬಡೀಷ್ ಮಾದರಿ ಶಾಲೆಯಲ್ಲಿ ಐದು ಬೋಧನಾ ಕೊಠಡಿಗಳಿದ್ದು, ಶೌಚಾಲಯಗಳಿಲ್ಲ. ಹಳೆ ಕಟ್ಟಡದಲ್ಲಿಯೂ ಶಾಲೆ ನಡೆಯುತ್ತಿದೆ. ಅದೇ ಕಾರಣಕ್ಕೆ ಸುಸಜ್ಜಿತ ಶಾಲೆ ಅವುಗಳನ್ನು ನಿರ್ಮಿಸಲು ಮುಖರ್ಜಿಯವರು, ತಮ್ಮ ಸ್ನೇಹಿತರು ಹಾಗೂ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಸಹ ಕರೆದುಕೊಂಡು ಬಂದು ಶಾಲೆಗೆ ಸೇರಿಸುವ ಕೆಲಸದಲ್ಲೂ ಮುಖರ್ಜಿ ತೊಡಗಿಸಿಕೊಂಡಿದ್ದಾರೆ.




Post a Comment