ಚಾರಿತ್ರಿಕ ಜಲಮೂಲ ಪಂಚಮಲಕಪ್ಪನ ಬಾವಿ

ಚಾರಿತ್ರಿಕ ಜಲಮೂಲ ಪಂಚಮಲಕಪ್ಪನ ಬಾವಿ






         



ಇಂದು ವಿಶ್ವ ಜಲ ದಿನ. ನೀರು ಮನುಷ್ಯನ ಮೂಲ ಅಗತ್ಯಗಳಲ್ಲೊಂದು .ನೀರು ಎಲ್ಲದಕ್ಕೂ ಬೇಕು.ಸಕಲ ಜೀವರಾಶಿಗೆ ಅತ್ಯಗತ್ಯವಾಗಿರುವ ಈ ನೀರಿನ ಸಮಸ್ಯೆ ಇಂದು ಉಲ್ಬಣಗೊಂಡಿದೆ. ಪರಿಣಾಮ ಜನರ ನೆಮ್ಮದಿ ಹಾಳಾಗಿದೆ. ನೀರಿಗಾಗಿ ಹೋರಾಟ, ಹೊಡೆದಾಟಗಳು ನಡೆದ ಉದಾಹರಣೆಗಳು ನಮ್ಮ ಕಣ್ಣೆದುರು ಹಲವು. ಹಾಗಿದ್ದರೆ ಈ ಜಲಸಂಕಷ್ಟಕ್ಕೆ ಕಾರಣವೇನು? ಎಂದು ಬೆನ್ನತ್ತಿ ಹೊರಟರೆ ಸಿಗುವ ಉತ್ತರ ನಮ್ಮೆಲ್ಲರ ದಡ್ಡತನವೇ ಹೊರತು ಪ್ರಕೃತಿಯದು ಇದರಲ್ಲಿ ಯಾವುದೇ ತಪ್ಪಿಲ್ಲ. 


ಈ ಬಾವಿ ನೋಡಿದವರು ಅನೇಕರು. ಆದರೆ ಅದರ ಹಿನ್ನೆಲೆ ಅರಿಯುವ ಯತ್ನಗಳು ನಡೆದದ್ದು ಅಷ್ಟಕ್ಕಷ್ಟೇ.
ಏನಿದರ ಇತಿಹಾಸ?
ಕ್ರಿ.ಶ 1476ರಲ್ಲಿ ಪಂಚಮಲಕಪ್ಪನ ಬಾವಿ ನಿರ್ಮಾಣಗೊಂಡಿದೆ. ಇಮ್ಮಡಿ ಸಿಂಗೆಯ ನಾಯಕನ ಮಡದಿ ಬಾಬಲಿನಾಯಕಿತ್ತಿ. ಇವರ ಮುದ್ದಿನ ಮಗಳು ದೇಮರಸಿ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸುತ್ತಾಳೆ. ಇವಳ ಸಾವಿನ ದೋಷ ಪರಿಹಾರಾರ್ಥ ಹಾಗೂ ಅವಳ ಆತ್ಮಶಾಂತಿಗಾಗಿ ಬಾವಿ ನಿರ್ಮಿಸಲಾಗಿದೆ ಎಂದು ಇಲ್ಲಿರುವ ಶಾಸನ ಹೇಳುತ್ತದೆ. ಜನರಿಗೆ ಜಲಸಂಕಟ ಉದ್ಭವಿಸದಿರಲಿ ಎನ್ನುವ ಸದಾಶಯದೊಂದಿಗೆ ನಿಮಾಣಗೊಂಡ ಈ ಬಾವಿಯ ವಾಸ್ತು ಶೈಲಿ ಅಪರೂಪ ಹಾಗೂ ಅನನ್ಯ. ಮೇಲ್ಛಾವಣಿಯಲ್ಲಿ ಏಳು ಹೆಡೆಯ ನಾಗಸರ್ಪದ ಆಕರ್ಷಕ  ಭಂಗಿ ಇಲ್ಲಿದೆ. ಈ ಸರ್ಪದಿಂದಲೇ ದೇಮರಸಿ ಮರಣ ಹೊಂದಿದಳು ಎನ್ನಲಾಗಿದ್ದು ಈ ಸರ್ಪದೋಷ ಪರಿಹಾರಾರ್ಥವಾಗಿ ಈ ರೀತಿ ವಿಭಿನ್ನ ಮಾದರಿ ಸರ್ಪಗಳನ್ನು ಇಲ್ಲಿ ಕೆತ್ತಿರುವ ಸಾಧ್ಯತೆಗಳಿವೆ.

ಇತಿಹಾಸತಜ್ಞರ ಊಹೆ ಪ್ರಕಾರ 16 ನೇ ಶತಮಾನದಲ್ಲಿ ಬಂಕಾಪುರದಲ್ಲಿದ್ದವರು ಹಂಡೆ ಮನೆತನದ ಪಾಳೆಯಗಾರರು. ಈ ಮನೆತನದ ಹನುಮಪ್ಪನಾಯಕನಿಗೆ ಐವರು ಮಕ್ಕಳು.ಇವರಲ್ಲಿ ಒಂದನೇ ಮತ್ತು ಎರಡನೇ ಮಕ್ಕಳು ಹಿರಿಯ ಮತ್ತು ಕಿರಿಯ ಮಲ್ಲಪ್ಪನಾಯಕರು. ಇವರಿಬ್ಬರೂ ಸೇರಿದಂತೆ ಉಳಿದ ಮೂವರ ಸಹಕಾರದಿಂದ ಈ ಬಾವಿ ನಿರ್ಮಾಣ ಮಾಡಲಾಗಿದೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಈ ಬಾವಿಗೆ ಪಂಚಮಲಕಪ್ಪನಬಾವಿ ಎಂದು ಕರೆಯುತ್ತಾರೆ.

 ಬಂಕಾಪುರದ ಪೂರ್ವ ದಿಕ್ಕಿಗಿರುವ ಈ ಬಾವಿ ಸಂಪೂರ್ಣವಾಗಿ ಕರಿ ಕಲ್ಲಿನಿಂದ ನಿರ್ಮಾಣಗೊಂಡಿದೆ. ಎರಡು ಅಂತಸ್ತುಗಳ ಈ ಬಾವಿಯ ಶಿಲ್ಪಕಲಾ ಸೃಷ್ಟಿ ಆಗಿನ ಕಾರ್ಮಿಕರ ವೃತ್ತಿನೈಪುಣ್ಯತೆಗೆ ಹಿಡಿದ ಕೈಗನ್ನಡಿ. 48 ಅಡಿ ಉದ್ದ 24 ಅಡಿ ಅಗಲದ ಈ ಬಾವಿಯ ಮೊದಲ ಅಂತಸ್ತಿನಲ್ಲಿ ಮೂರು ವಿಭಾಗಗಳಿವೆ. ಮೊದಲ ಭಾಗದ ಎರಡೂ ಬದಿಗೆ ಎರಡು ಕೋಣೆಗಳಿವೆ. ಎರಡೂ ಕೋಣೆಗಳಲ್ಲಿ ಶಿವಲಿಂಗ ಹಾಗೂ ನಂದಿ (ಬಸವಣ್ಣ)ಯ ವಿಗ್ರಹಗಳಿವೆ.ದ್ವಾರಗಳ ಮೇಲಿನ ಕೆತ್ತನೆ ಸೌಂದರ್ಯ ನೋಡಲು ಕಣ್ಣುಗಳೆರೆಡು ಸಾಲದು. ಗರ್ಭಗೃಹದ ಮೇಲ್ಭಾಗದಲ್ಲಿ ಗಜಲಕ್ಷ್ಮಿಯ ಸುಂದರ ಕೆತ್ತನೆ ಇದೆ. ದ್ವಾರಪಾಲಕರ ಕೈಗಳಲ್ಲಿ ಗದೆಗಳಿದ್ದು ಮೇಲಂಕಣದಲ್ಲಿ ಆರು ಜನರ ವಿಭಿನ್ನ ನೃತ್ಯ ಭಂಗಿಯ ಕಣ್ಮನ ಸೆಳೆಯುವ ಚಿತ್ರಗಳಿವೆ. ಕಟ್ಟೆಗಳ ಮೇಲೆ ಗಂಡು ಹೆಣ್ಣುವೊಂದು ಪರಸ್ಪರ ಚರ್ಚೆಯಲ್ಲಿ ತೊಡಗಿರುವ ಶಿಲ್ಪಗಳಿವೆ. ಪಶ್ಚಿಮಕ್ಕೆ ಮುಖ್ಯದ್ವಾರ ಹೊಂದಿರುವ ಈ ಬಾವಿ ಮೆಟ್ಟಿಲುಗಳ ಎರಡೂ ಬದಿ ಗೋಡೆಗಳಲ್ಲಿ ಎರಡು ಗೂಡುಗಳಿವೆ. ಒಂದರಲ್ಲಿ ಗಣೇಶ ವಿಗ್ರಹ ಇನ್ನೊಂದರಲ್ಲಿ ಆಂಜನೇಯನ ವಿಗ್ರಹವಿದೆ.ಮೆಟ್ಟಿಲು ಎದುರು ಈಶ್ವರನ ಗುಡಿಯಿದೆ. ಬಾವಿಯ ಮೇಲ್ಭಾಗದ ನಾಲ್ಕೂ ಮೂಲೆಗಳಲ್ಲಿ ಆನೆಗಳಿವೆ.

 ಮಳೆಗಾಲದಲ್ಲಿ ಇಂದಿಗೂ ತುಂಬಿ ಹರಿಯುವ ಈ ಬಾವಿ ಬಂಕಾಪುರದ ಅರಳೆಲೆಮಠದ ಸುತ್ತ ನಿವಾಸಿಗಳ ಜಲಮೂಲವೂ ಹೌದು. ನೆಲಅಂತಸ್ತಿನಲ್ಲಿರುವ ಈಶ್ವರನ ದೇಗುಲದಲ್ಲಿ ಈಗ ಬಾವುಲಿಗಳು, ಕಣಕಪ್ಪಲಿಗಳು ವಾಸವಾಗಿವೆ. ಯಾರಾದರೂ ನೋಡಲು ಹೋದರೆ ಹೊರಗೆ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತವೆ. ಮಳೆಗಾಲದಲ್ಲಿ ಎರಡನೇ ಅಂತಸ್ತಿನವರೆಗೂ ನೀರು ತುಂಬಿದಾಗ ಜನ ಮೇಲಿನಿಂದಲೇ ನೀರು ತುಂಬಿಸಿಕೊಂಡು ಹೋಗುತ್ತಾರೆ. ಬಾವಿಗೆ ಮೇಲಿನಿಂದ ಕಸ ಬೀಳುತ್ತದೆ. ಸದ್ಯ ನೀರು ಹಸಿರಾಗಿದೆ. ಆಗಾಗ್ಗೆ ಕಸ ತೆಗೆಸಲಾಗುತ್ತದೆಯಾದರೂ ಪೂರ್ಣ ಪ್ರಮಾಣದ ರಕ್ಷಣೆ ಇಲ್ಲ. ಬಾವಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರಕಾಶ ಆಲದಕಟ್ಟಿ ಅವರು  .ವರ್ಷಕ್ಕೆ ಎರಡು ಬಾರಿ ಬಾವಿ ಸ್ವಚ್ಛಗೊಳಿಸುತ್ತಾರೆ. ಬಾವಿ ಸುತ್ತ ಬೆಳೆದ ಗಿಡದ ಟೊಂಗೆಗಳನ್ನು ಕಾಲಕಾಲಕ್ಕೆ ಕತ್ತರಿಸುತ್ತಾರೆ.

ಬೇಸಿಗೆಯಲ್ಲಿ ನೀರಿನಮಟ್ಟ ಕ್ಷೀಣಿಸಿದಾಗ ಬೋರವೆಲ್‍ನಿಂದ ನೀರು ಹರಿಸಲಾಗುತ್ತದೆ. ಬಾವಿ ದಂಡೆಗೆ ಹೊಂದಿಕೊಂಡಿರುವ ತೋಟದಲ್ಲಿ ಬಾಳೆ ಗಿಡಗಳು ನಳಿನಳಿಸುತ್ತಿರಲು ಈ ಬಾವಿ ನದಿ ನೀರೇ ಕಾರಣ. ಬೋರವೆಲ್‍ನ ಅಂತರ್ಜಲಮಟ್ಟ ಬತ್ತದ ಹಾಗೆ ನೋಡಿಕೊಂಡಿದ್ದು ಈ ಬಾವಿಯೇ. 

ಶಿಲ್ಪಸೌಂದರ್ಯದಷ್ಟೇ ವಿಪುಲ ಜಲಸಂಪತ್ತನ್ನು ನೀಡಿರುವ ಈ ಬಾವಿ ವ್ಯವಸ್ಥಿತ ಜಲ ಸಂರಕ್ಷಣೆಗೆ ಉತ್ತಮ ನಿದರ್ಶನ. ಆಕರ್ಷಕ ಕಲಾಕುಸುರಿಯಿಂದ ಇಂದಿಗೂ ಕಂಗೊಳಿಸುತ್ತಿರುವ ಈ ಬಾವಿ ಇಂದಿನ ಜನರ ಜಲಮೂಲಗಳ ನಿರ್ಲಕ್ಷ್ಯತನದಿಂದ ಜಲಸಂಪನ್ಮೂಲಗಳ ರಕ್ಷಣೆ ಮರೆತು ಈಗ ಪರದಾಡುವ ನಮ್ಮೆಲ್ಲರ ಮನೋಭಾವನೆ ನೋಡಿ ಈ ಬಾವಿ ವ್ಯಥೆ ಪಡುತ್ತಿದೆ. 
ನಮ್ಮ ಇಂದಿನ ಜಲ ಸಂಕಟಕ್ಕೆ ಕಾರಣ  ನೀರು ಭೂಮಿಯಲ್ಲಿ ಬೇಕಾದಷ್ಟಿದೆಯೆಂದು ನಂಬಿ ಬಳಕೆ ವಿಸ್ತರಿಸಿದ ಪರಿಣಾಮ . ಮಳೆ ಕಡಿಮೆಯಾಗಿದೆ, ಕೆರೆಗಳು ಕಣ್ಮರೆಯಾಗಿವೆ. ಬ್ಯಾಂಕಿನಲ್ಲಿ ಹಣ ಠೇವಣಿಯಿಡದೇ ದಿನವೂ ಸಾಲ ಬೇಡುತ್ತಿದ್ದರೆ ಏನಾದೀತು? ಒಡ್ಡುಕಟ್ಟುವುದು, ಕೆರೆ ಹೂಳು ತೆಗೆಯುವುದು,

ಕಾಡು ಉಳಿಸುವುದನ್ನು ಕೈಬಿಟ್ಟೆವು. ಗ್ರಾಮದ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮರೆತ ಫಲವಾಗಿ ಜಲಕ್ಷಾಮ ಅನುಭವಿಸುತ್ತಿದ್ದೇವೆ. ಕೊಳವೆ ಬಾವಿಯ ಆಳ ಹೆಚ್ಚಿಸುತ್ತ, ವಾಣಿಜ್ಯ ಬೆಳೆಗಳ ಹಿಂದೆ ಓಡುತ್ತ ನೆಲ ಜಲ ಸಂರಕ್ಷಣೆಯ ಸೂತ್ರ
ಇಂದು ಹದತಪ್ಪಿದೆ.


Post a Comment

Distributed by Presul Info Tech

Distributed by Gooyaabi Templates | Designed by Presul Info Tech