ಪ್ರತಿ ವರ್ಷ ಸರಕಾರ ಹಾಗೂ ಸಂಘ ಸಂಸ್ಥೆಗಳು ಮಹಿಳಾ ದಿನ ಆಚರಿಸುತ್ತವೆ. ಒಂದಿಷ್ಟು ವಿಚಾರ ಸಂಕಿರಣ, ಚಿಂತನ -ಮಂಥನ ,ಸಮಾವೇಶ ನಡೆಯುತ್ತವೆ. ನಾಯಕರಿಂದ ಮಹಿಳೆ ಶೋಷಣೆ ಬಗ್ಗೆ ಅಬ್ಬರದ ಮಾತುಗಳನ್ನು ಕೇಳುತ್ತೇವೆ. ಹೋರಾಟದ ಬಗ್ಗೆ ಚರ್ಚೆ ಕೇಳುತ್ತೇವೆ. ಇದೆಲ್ಲುದರ ಮಧ್ಯೆ ತೆರೆಮರೆಯಲ್ಲಿ ತಾನಾಯ್ತು ತನ್ನ ಬದುಕಾಯ್ತು ಎಂದುಕೊಂಡು ಪುರುಷನಿಗೆ ಸರಿಸಮನಾಗಿ ದುಡಿಮೆ ಮಾಡುತ್ತ ಜೀವನ ನಡೆಸುತ್ತಿರುವವರು ಅನೇಕರಿದ್ದಾರೆ. ಈ ಪಟ್ಟಿಗೆ ಸೇರ್ಪಡೆ ತಮಿಳುನಾಡು ಮೂಲದ ವಲ್ಲಿ ಎಂಬ ಮಹಿಳೆ.
ವಲ್ಲಿಗೆ ಪ್ರಚಾರದ ಯಾವುದೇ ಹಂಗಿಲ್ಲ. ನಾನು ಮಹಿಳೆ ಪುರುಷನಷ್ಟು ಸಮನಾಗಿ ದುಡಿಯಲು ಆಗದ ಮಾತು. ಸಮಾಜದಲ್ಲಿ ಇದಕ್ಕೆ ಪ್ರೋತ್ಸಾಹವಿಲ್ಲ ಎಂದು ಗೊಣಗುತ್ತ ಮನೆಯಲ್ಲಿ ಕುಳಿತುಕೊಳ್ಳದೇ ಎದುರಾದ ಸಂದರ್ಭಕ್ಕೆ ತಕ್ಕನಾಗಿ ಒಗ್ಗಿಕೊಂಡು ಲಾರಿ ಚಾಲಕ ವೃತ್ತಿ ಕೈಗೆತ್ತಿಕೊಂಡಿದ್ದಾರೆ. 8 ಚಕ್ರಗಳ ಲಾರಿ ಜೊತೆಗೆ ಸಂಸಾರದ ಗಾಡಿ ಓಡಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಹೀಗೆ ಯಾರ ಭಯವಿಲ್ಲದೇ, ಲಾರಿ ಓಡಿಸುತ್ತಿರುವ ಈ ವಲ್ಲಿ ಮೂಲತ ತಮಿಳುನಾಡಿನ ಸೇಲಂ ಜಿಲ್ಲೆಯವರು. ಕರ್ನಾಟಕ ರಾಜ್ಯಕ್ಕೆ 1996 ರಲ್ಲಿ ಬಂದು ನೆಲಸಿದ್ದಾರೆ. ಕೆವಲ 5 ನೇ ತರಗತಿ ಓದಿರುವ ಇವರು ಅಂದಿನಿಂದ ಇಂದಿನವರೆಗೂ ತಮ್ಮ ತಂದೆ ಹಾಗೂ ಅಣ್ಣನ ಜತೆ ಸೇರಿಕೊಂಡು ಲಾರಿ ಓಡಿಸುವುದನ್ನು ಕಲಿತು, ಇದೀಗ ಚಾಲಕವೃತ್ತಿಯನ್ನೇ ಜೀವನದ ಉಸಿರನ್ನಾಗಿಸಿಕೊಂಡಿದ್ದಾರೆ..
ವಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬರಗೂರ ಕ್ಯಾಂಪ್ ನಿವಾಸಿ. ತನ್ನ 15 ನೇ ವಯಸ್ಸಿನಲ್ಲಿ ತಂದೆ ಸುಬ್ರಮಣ್ಯ ಮತ್ತು ಅಣ್ಣ ಚಂದ್ರು ಜತೆ ತಮ್ಮದೇ ಲಾರಿಯಲ್ಲಿ ಭತ್ತ ತುಂಬಿಕೊಂಡು ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗೋವಾಕ್ಕೆ ದಿನನಿತ್ಯ ಹೋಗುತ್ತಿದ್ದಳು. ಬಾಲ್ಯದಲ್ಲಿ ತಂದೆಯೊಂದಿಗೆ ಸೇರಿಸಿದ ಕೈಗಳಿಗೆ ಈಗ ದಿನನಿತ್ಯ ಕಾಯಕ ಅಂದ್ರೆ ಬಸವಣ್ಣನವರು ಹೇಳಿದ ಮಾತಿನಂತೆ ಕಾಯಕವೇ ಕೈಲಾಸವಾಗಿಬಿಟ್ಟಿದೆ. ವಲ್ಲಿ ಇದೀಗ ದೊಡ್ಡ ಟೌರಸ್ ಲಾರಿಗಳನ್ನು ಸರಾಗವಾಗಿ ಓಡಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ರಾಜ್ಯಸ್ಥಾನ, ಮಧ್ಯಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ನೇರೆಯ ರಾಜ್ಯಗಳಿಗೆ ಭತ್ತ, ಅಕ್ಕಿ, ಗೋಧಿ, ಮೆಕ್ಕೆ ಜೋಳ ಸೇರಿದಂತೆ ಅನೇಕ ಸಾಮಗ್ರಿಗಳನ್ನು ಲಾರಿಯಲ್ಲಿ ಸಾಗಿಸುತ್ತಾರೆ.
ದೂರದ ಊರುಗಳಿಗೆ ಹೋಗುವ ವಲ್ಲಿ ಎಂದಿಗೂ ಕೂಡ ಎದೆಗುಂದಿಲ್ಲಾ. ದೇವರನ್ನು ನೆನೆದು ತನ್ನ ಕೆಲಸಕ್ಕೆ ಮುಂದಾಗುತ್ತಾಳೆ. ಪೆಟ್ರೋಲ್ ಬಂಕ್‍ಗಳಲ್ಲಿಯೂ ಸ್ವಂತ ತಾನೆ ಮುಂದೆ ನಿಂತು ಡಿಸೈಲ್ ಹಾಕಿಸಿಕೊಳ್ಳುವ ಮೂಲಕ ಕೆಲಸದಲ್ಲಿ ಶ್ರದ್ಧೆಯನ್ನು ಮತ್ತಷ್ಟು ಹೆಚ್ಚಿಗೆ ತೋರಿಸುತ್ತಾಳೆ. ವಾರದಲ್ಲಿ 8 ರಿಂದ 10 ದಿನ ಹೊರರಾಜ್ಯಗಳಲ್ಲಿಯೇ ಬಾಡಿಗೆ ತೆಗೆದುಕೊಂಡು ಲಾರಿ ಹೊಡೆಯುವ ವಲ್ಲಿ, ಹೆಚ್ಚೆಚ್ಚು ಬಾಡಿಗೆ ಬಂದ್ರೆ, 600 ಕಿ.ಮೀ. ಲಾರಿ ಚಲಾಯಿಸುತ್ತಾರೆ..
ವಲ್ಲಿ ಪತಿ ಸೆಲ್ವರಾಜ್ ವೃತ್ತಿಯಲ್ಲಿ ಎಂಜಿನಿಯರ್. ಇಬ್ಬರು ಮಕ್ಕಳು ತಮಿಳುನಾಡಿನ ಸೇಲಂ ನಲ್ಲಿ ಶಾಲೆ ಕಲಿಯುತ್ತಿದ್ದಾರೆ. ತಂದೆ ತಾಯಂದಿರು ಮನೆಯಲ್ಲಿದ್ದಾರೆ. ಹಗಲು-ರಾತ್ರಿ ಚಾಲನೆಯ ಪರಿಶ್ರಮದಿಂದಾಗಿ ಇಂದು ವಲ್ಲಿ ಹತ್ತಿರ ಸುಮಾರು 4 ಸ್ವಂತದ್ದೆ ಲಾರಿಗಳು ಇವೆ. ಜೊತೆಗೆ ಇನ್ನು 17 ಲಾರಿಗಳ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾಳೆ.. 17 ಲಾರಿಗಳನ್ನು ಸುಸ್ಥಿತಿಯಲ್ಲಿ ನೋಡುವದರ ಜೊತೆಗೆ ಇವುಗಳ ಚಾಲನೆ ಮಾಡುವ ಕುಟುಂಬದ ಜವಾಬ್ದಾರಿ ಸಹ ಇವರ ಮೇಲೆ ಇದೆ.




Post a Comment