ಬೆಟರ್ ಕರ್ನಾಟಕಾ.ಕಾಮ್ ಲೋಕಾರ್ಪಣೆ



ಅದು ಕನಕದಾಸರು ಜನ್ಮವೆತ್ತ ಐತಿಹಾಸಿಕ ಸ್ಥಳ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದ ಕನಕದಾಸ ಅರಮನೆ. ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸಕ್ಕೆ ಮುಂದಾಗಿದ್ದ ಶ್ರೇಷ್ಠ ಹರಿಭಕ್ತ ಸಂತ ಕನಕದಾಸರ ಚಿಂತನೆಗಳು ಮತ್ತು ಆಶಯಗಳನ್ನು ಬಿಂಬಿಸುವ ಪ್ರಚುರಪಡಿಸುವ ಸ್ಥಳ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ಷಮೆತೆಯನ್ನು ಪ್ರತಿಬಿಂಬಿಸುವ ಒಂದು ಅಭೂತಪೂರ್ವ ಸ್ಥಳ.

ಇಂತಹ ತಪೋಭೂಮಿಯಲ್ಲಿ ಸಕಾರಾತ್ಮಕ  ಚಿಂತನೆ, ಅಭಿವದ್ಧಿ ಆಶಯ, ಸಮಾಜಮುಖಿ ಆಲೋಚನೆಯನ್ನು ಸಾರುವ ನಮ್ಮ ಬೆಟರ್ ಕರ್ನಾಟಕಾ .ಕಾಮ್ ವೆಬ್ ಸೈಟ್ ಮಾ.13 ರಂದು ಲೋಕಾರ್ಪಣೆಗೊಂಡಿತು. ಆ ಮೂಲಕ ಅಂತರ್ಜಾಲ ಮಾಧ್ಯಮಲೋಕದಲ್ಲೊಂದು ಹೊಸ ಮನ್ವಂತರಕ್ಕೆ ನಾಂದಿ ಹಾಡಲು ಈ ವೆಬ್ ಸೈಟ್ ಪಾದಾರ್ಪಣೆ ಮಾಡಿತು.

 ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿದ ಶಾಸಕ ಬಸವರಾಜ ಬೊಮ್ಮಾಯಿ ಸಕಾರಾತ್ಮಕ ಚಿಂತನೆಗಳು ಸ್ವಸ್ಥ ಸಮಾಜಕ್ಕೆ ರಹದಾರಿ.ಸತ್ಚಿಂತನೆ, ಯಶೋಗಾಥೆ  ಬದುಕಿನಲ್ಲಿ ಸಾಧನೆಗೆ ಪ್ರೇರೇಪಿಸುತ್ತವೆ. ಇಂತಹ ಸಕಾರಾತ್ಮಕ ವಿಷಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಧ್ಯಮಗಳಿಂದಾಗಬೇಕಿದೆ ಎಂದು  ಮಾರ್ಮಿಕವಾಗಿ ಕರೆ ನೀಡಿದು.

ಸಮಾಜದಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ಮಾತನಾಡಿದ ಅವರು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮ ಬಲುಮುಖ್ಯ ಜವಾಬ್ದಾರಿ ಹೊರಬೇಕಾಗುತ್ತದೆ. ಇಲ್ಲಿ ಪ್ರಸಾರವಾಗುವ ಅಥವಾ ಪ್ರಕಟವಾಗುವ ವರದಿಗಳು ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುತ್ತವೆ. ನಾವಿಂದು ಖ್ಯಾತನಾಮರ  ಬದುಕಿನ ಆಂತರಿಕ ಕಲಹಗಳನ್ನು ನೋಡುವ ಸ್ಥಿತಿಗೆ ಬಂದು ತಲುಪಿದ್ದೇವೆ. ಪ್ರಸಿದ್ಧ ವ್ಯಕ್ತಿಗಳ ಖಾಸಗಿ ಬದುಕಿನ ಬಗ್ಗೆ  ವರದಿಗಳನ್ನು ಬಿತ್ತ ರಿಸುವ ಮಾಧ್ಯಮಗಳೇ ಹೆಚ್ಚಾಗಿವೆ. ಅಪರಾಧ , ಹಿಂಸೆ ಎಲ್ಲೆಡೆ ವಿಜೃಂಭಿಸುತ್ತಿವೆ. ಮಾನವೀಯ ಮೌಲ್ಯಗಳು ಮರೆಯಾಗಿ ನೈತಿಕ ಅಧಃಪತನವಾಗುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ  ಸಕಾರಾತ್ಮಕ ಚಿಂತನೆ, ಅಭಿವೃದ್ಧಿ ಆಶಯದ  ಜಾಲತಾಣಗಳು ಸಮಾಜಕ್ಕೆ ಇಂದು ತುರ್ತಾಗಿ ಬೇಕಿವೆ. ಸಾಧಕರ ತವರು ಕರ್ನಾಟಕ. ಪ್ರತಿಯೊಂದು ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿರುವ ಜೀವಿಗಳು ನಮ್ಮ ಮಧ್ಯೆ ಹಲವರಿದ್ದಾರೆ. ಅಂಥವರನ್ನು ಸಮಾಜಕ್ಕೆ ಪರಿಚಯಿಸಿ ಇಂತಹ ಮತ್ತಷ್ಟು ಸಾಧನಾ ಜೀವಿಗಳು ಹೊರಹೊಮ್ಮಲು ಈ ಜಾಲತಾಣ ಶ್ರಮಿಸಲಿ ಎಂದು ಆಶಿಸಿದರು. ಪ್ರೊಜೆಕ್ಟರ್ ಮೂಲಕ ವೆಬ್ಸೈಟ್ಗೆ ಗುಂಡಿ ಒತ್ತುವ ಮೂಲಕ ಬೊಮ್ಮಾಯಿಯವರು  ವೆಬ್ಸೈಟ್ಗೆ ಚಾಲನೆ ನೀಡಿದರು.

ಮುಖ್ಯ ಅತಿಥಿ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಅಂತರ್ಜಾಲದಿಂದ ಇಂದು ಜಗತ್ತು ಚಿಕ್ಕದಾಗಿದೆ. ದೂರದ ಆಫ್ರಿಕಾದಲ್ಲಿ ಔಟರನೆಟ್ ಪ್ರಯೋಗ ಕೂಡ ನಡೆದಿದ್ದು  ದಿನೇ ದಿನೇ ಜಗತ್ತು ತಂತ್ರಜ್ಞಾನದ ಶಿಖರ ಏರುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಸ್ಥಳೀಯ ಅಭಿವೃದ್ಧಿಗೆ ಪೂರಕ ಅಂಶಗಳನ್ನು ಮಾಹಿತಿಯನ್ನು ಇಂತಹ ಜಾಲತಾಣಗಳು ಕೊಡಬೇಕು ಎಂದು ಹೇಳಿದರು. ಇಂದು ಬಹುತೇಕರು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಅಂಗೈಯಲ್ಲೇ ಜಗತ್ತು ನೋಡುವ ಸೌಲಭ್ಯ ಹೊಂದಿದ್ದಾರೆ. ಆದರೆ ಅದರ ದುರ್ಬಳಕೆ ಬಗ್ಗೆ ವಿಷಾಧಿಸಿದ ಉದಾಸಿ ಕ್ರೌರ್ಯ, ಹಿಂಸೆಗೆ ಉತ್ತೇಜಿಸುವ ವಿಷಯಗಳ ಬದಲು ಸಾಧನೆಯ ತುಡಿತ ಹೆಚ್ಚಿಸುವ ವಿಷಯಗಳು ಇಂದಿನ ಪ್ರಮುಖ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಮಾತನಾಡಿ ಇಂಟರನೆಟ್ನಲ್ಲಿನ ಕ್ರೌರ್ಯ ಹಾಗೂ ಹಿಂಸಾತ್ಮಕ ದೃಶ್ಯಗಳನ್ನು ನೋಡುವುದರಿಂದ ಮನೋವಿಕೃತಿ ಉಂಟಾಗುತ್ತದೆ. ಅದರ ಬದಲು ಎಲ್ಲೆಲ್ಲಿ ಅಪರೂಪದ ಕೆಲಸ ಮಾಡಿದ್ದಾರೆ? ಏನೆಲ್ಲಾ ಸಾಧನೆ ಮಾಡಿದ್ದಾರೆ ಎನ್ನುವ ವಿಚಾರ ಅರಿತಲ್ಲಿ ಸಮಾಜದಲ್ಲಿ ಅಭಿವೃದ್ಧಿಯ ಬೀಜ ಅಂಕುರವಾಗುತ್ತದೆ. ನಮ್ಮಲ್ಲೂ ಸುಧಾರಣೆಯ ಗಾಳಿ ಬೀಸುತ್ತದೆ. ತಂತ್ರಜ್ಞಾನದ ಬಳಕೆ ಆಧಾರದ ಮೇಲೆ ಅಭಿವೃದ್ಧಿ ಹಾಗೂ ಸಾಮಾಜಿಕ ಸ್ವಾಸ್ಥ್ಯ ಅವಲಂಬನೆಯಾಗಿದೆ ಎಂದರು.

 ಬೆಟರ್ ಕರ್ನಾಟಕಾ. ಕಾಮ್ ನ ಮುಖ್ಯ ಪ್ರವರ್ತಕ ಪ್ರವೀಣಕುಮಾರ ಪೋಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಜಗನ್ನಾಥ ಗಿನೇಣ್ಣವರ ನಿರೂಪಿಸಿದರು. ಲಾವಣ್ಯ ಹಾಗೂ ಸಂಗಡಿಗರಿಂದ ಪ್ರಾರ್ಥನೆ ನಡೆಯಿತು.

Post a Comment

Distributed by Presul Info Tech

Distributed by Gooyaabi Templates | Designed by Presul Info Tech